ಬೆಂಗಳೂರು: ನಾಯಕತ್ವ ಗುಣದಿಂದ ಪಕ್ಷದಲ್ಲಿ ಸ್ಥಾನ ಮತ್ತು ಉತ್ತಮ ಅವಕಾಶ ಲಭಿಸುತ್ತದೆ. ಪಕ್ಷದ ವಿಚಾರಧಾರೆ, ಉದ್ದೇಶಕ್ಕೆ ಅನುಗುಣವಾಗಿ ಸಂಘಟನೆ ಬೆಳೆಸುವ ಮೂಲಕ ಸ್ಥಾನಮಾನದ ಸದುಪಯೋಗ ಮಾಡಬೇಕು ಎಂದು ರಾಜ್ಯದ ಸಚಿವರಾದ ಎಸ್. ಅಂಗಾರ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾದ ವತಿಯಿಂದ ಇಂದು ಬೆಂಗಳೂರಿನ “ಸ್ಕೌಟ್ಸ್ & ಗೈಡ್ಸ್ ಸಭಾಭವನ”ದಲ್ಲಿ ನಡೆದ ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
1989ರಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಸೋತಿದ್ದೆ. 1994ರಿಂದ ಸುಳ್ಯದಲ್ಲಿ ಬಿಜೆಪಿ ನಿರಂತರವಾಗಿ ಗೆಲ್ಲುತ್ತ ಬಂದಿದೆ. ಹಿಂದಿನ ಗೆದ್ದ ಅಭ್ಯರ್ಥಿಗಳು ಪಕ್ಷಾಂತರ ಮಾಡಿದ್ದರು. ಆದರೆ, ನಾನು ಒಂದೇ ಪಕ್ಷದಲ್ಲಿ ನಿಂತು ಗೆಲುವನ್ನು ತಂದು ಕೊಟ್ಟೆ. ಅಧಿಕಾರಕ್ಕಾಗಿ ಪಕ್ಷಾಂತರ ಸಲ್ಲದು ಎಂಬುದನ್ನು ನಾನು ತೋರಿಸಿಕೊಟ್ಟಿದ್ದು, ಜನರ ವಿಶ್ವಾಸ ಪಡೆದಿರುವುದಾಗಿ ತಿಳಿಸಿದರು.
ವಿಚಾರದ ಆಧಾರದಲ್ಲಿ ಬೆಳೆಯಬೇಕು. ಅಧಿಕಾರದ ಆಸೆಗೆ ಪಕ್ಷಾಂತರ ಮಾಡಬಾರದು ಎಂದು ಅವರು ಕಿವಿಮಾತು ಹೇಳಿದರು. ಸಂಘಟನೆಗಾಗಿ ಶ್ರಮಿಸಿದಾಗ ಗುಣಮಟ್ಟದ ನಾಯಕತ್ವ ಬೆಳೆಯುತ್ತದೆ ಎಂದು ಅವರು ವಿವರಿಸಿದರು.
ಅವಕಾಶಗಳು ನಮ್ಮನ್ನು ಹುಡುಕಿ ಬರುವಂಥ ನಾಯಕತ್ವ ಗುಣ ನಮ್ಮದಾಗಬೇಕು. ಡಾ. ಅಂಬೇಡ್ಕರ್ ಅವರು ಅವಕಾಶಗಳನ್ನು ಹುಡುಕಿ ಹೋಗಲಿಲ್ಲ. ಅವಕಾಶವೇ ಅವರನ್ನು ಹುಡುಕಿ ಬಂತು ಎಂದು ತಿಳಿಸಿದರು. ಪಕ್ಷದ ಸಂಘಟನೆ ಬಲಪಡಿಸಲು ನಾವೆಲ್ಲರೂ ಶ್ರಮಿಸಬೇಕು ಎಂದು ಅವರು ಮನವಿ ಮಾಡಿದರು.
ಜನಸಂಪರ್ಕ, ಪಕ್ಷದ ವಿಚಾರಧಾರೆಯನ್ನು ತಿಳಿಸುವುದು, ಕೇಂದ್ರ- ರಾಜ್ಯ ಸರಕಾರಗಳ ಯೋಜನೆಗಳನ್ನು ಫಲಾನುಭವಿಗೆ ಒದಗಿಸಿಕೊಡುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದು ತಿಳಿಸಿದರು. ತಮ್ಮ ಕ್ಷೇತ್ರದಲ್ಲಿ ಕಂದಾಯ ಅದಾಲತ್, ಗ್ರಾಮ ವಾಸ್ತವ್ಯವನ್ನು ಹಮ್ಮಿಕೊಂಡಿರುವುದಾಗಿ ವಿವರ ನೀಡಿದರು.
ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಅಲ್ಲದೆ ಮತದಾನ ಪ್ರಮಾಣವೂ ಹೆಚ್ಚಾಗಿದೆ. ಇದು ಅತ್ಯಂತ ಸಂತಸದ ವಿಚಾರ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣ ಅವರು ತಿಳಿಸಿದರು. 5 ದಶಕಗಳಲ್ಲಿ 2ನೇ ಬಾರಿ ಮುಖ್ಯಮಂತ್ರಿಯಾಗಿ ಶಪಥ ಸ್ವೀಕರಿಸಿದ ಯೋಗಿ ಅವರನ್ನು ಅಭಿನಂದಿಸಿದರು.
ಕಾಂಗ್ರೆಸ್ ಇದೀಗ ಪ್ರಾದೇಶಿಕ ಪಕ್ಷದಿಂದ ಕಡಿಮೆ ಸ್ಥಾನಗಳನ್ನು ಪಡೆದಿದೆ. ಮುಲಾಯಂ ಸಿಂಗ್ ಪಕ್ಷ, ಡಿಎಂಕೆ, ಸಮಾಜವಾದಿ ಪಕ್ಷ, ಟಿಎಂಸಿ ಎಲ್ಲವೂ ಪ್ರೈವೇಟ್ ಲಿಮಿಟೆಡ್ ಆಗಿವೆ. ಆದರೆ, ಕೌಟುಂಬಿಕ ಹಿನ್ನೆಲೆ ಇಲ್ಲದ ನಾಯಕರೂ ಮುಖ್ಯಮಂತ್ರಿ, ಪ್ರಧಾನಿ ಆಗಬಹುದು ಎಂಬುದನ್ನು ಬಿಜೆಪಿ ತೋರಿಸಿಕೊಟ್ಟಿದೆ ಎಂದು ನುಡಿದರು.
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಮಾಡಿದ ಜನಪರ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಾವು ಜನತೆಗೆ ತಿಳಿಸಬೇಕು. ಜನೋಪಯೋಗಿ ಯೋಜನೆಗಳನ್ನು ಜನರಿಗೆ ಸಿಗುವಂತೆ ಮಾಡಬೇಕು ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವು ಅಪ್ರಸ್ತುತ ಆಗಲಿದೆ ಎಂದು ತಿಳಿಸಿದರು. ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವು ನಿರ್ನಾಮವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಷ್ಟ್ರ ನಾಯಕರ ಭೇಟಿಯಿಂದ ಪಕ್ಷವು ಮತ ಕಳೆದುಕೊಳ್ಳಲಿದೆ ಎಂಬ ಆತಂಕ ಕಾಂಗ್ರೆಸ್‍ನವರಲ್ಲಿದೆ ಎಂದರು.
ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಗಳಾದ ಕುಮಾರ್ ಅವರು ಸಂಘಟನೆಗೆ ಮಾರ್ಗದರ್ಶನ ನೀಡಿದರು. ನಾಲ್ಕು ರಾಜ್ಯಗಳಲ್ಲಿ ಪಕ್ಷದ ಅದ್ವಿತೀಯ ಸಾಧನೆಗೆ ಅವರು ಮೆಚ್ಚುಗೆ ಸೂಚಿಸಿದರು.
ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರು ಪಾದಸ್ಪರ್ಶ ಮಾಡಿದ 7 ಜಿಲ್ಲೆಯ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಅಲ್ಲಿ ಸ್ಮಾರಕ ನಿರ್ಮಿಸಲು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರಕಾರ ಮುಂದಾಗಿದೆ. ನರೇಂದ್ರ ಮೋದಿ ಅವರ ಮಾದರಿಯಲ್ಲಿ ಇದೊಂದು ಮಹತ್ವದ ಕಾರ್ಯ ಎಂದು ಮೆಚ್ಚುಗೆ ಸೂಚಿಸಿದರು. ದಲಿತ ಪರಂಪರೆಗೆ ನಮ್ಮ ಬಿಜೆಪಿ ಸರಕಾರ ಪ್ರೋತ್ಸಾಹ ಕೊಡುತ್ತಿದೆ ಎಂದು ವಿವರಿಸಿದರು. ಇದಕ್ಕಾಗಿ ಮುಖ್ಯಮಂತ್ರಿಗಳು ಮತ್ತು ಪ್ರಧಾನಿಯವರಿಗೆ ಅವರು ಧನ್ಯವಾದ ಸಮರ್ಪಿಸಿದರು.
ಕೋವಿಡ್ ಅವಧಿಯಲ್ಲಿ ಕೆಲವೊಮ್ಮೆ ನಾವು ಸಂಘಟನೆಯಲ್ಲಿ ಸ್ವಲ್ಪ ಹಿಂದುಳಿದಿರಬಹುದು. ಆದರೆ, ಈಗ ಚುನಾವಣೆ ಹತ್ತಿರ ಬರುತ್ತಿದೆ. ನಾವೀಗ ಹೆಚ್ಚು ಉತ್ಸಾಹದಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮೋರ್ಚಾದ ಅಧ್ಯಕ್ಷನಾಗಿ ಮೂರು ಬಾರಿ ರಾಜ್ಯದ ಪ್ರವಾಸ ಮಾಡಿದ್ದೇನೆ. ಅಲ್ಲದೆ, ಸಂಘಟನಾ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡಿದ್ದೇನೆ ಎಂದರು. ಪದಾಧಿಕಾರಿಗಳೂ ಅಷ್ಟೇ ಚೆನ್ನಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಎಸ್.ಸಿ. ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದ್ದರು.