ಬೆಂಗಳೂರು: ವೈಜ್ಞಾನಿಕತೆಯ ದೃಷ್ಟಿಕೋನದಿಂದ ಜನರ ಜೀವನ ಮಟ್ಟ ಸುಧಾರಣೆಗೆ ನ್ಯಾನೋ ತಾಂತ್ರಿಕತೆಯನ್ನು ಬಳಕೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವಿಷನ್ ಗ್ರೂಪ್ ಆನ್ ನ್ಯಾನೋಟೆಕ್ನಾಲಜಿ ವತಿಯಿಂದ ಆಯೋಜಿಸಿದ್ದ ಬೆಂಗಳೂರು ಇಂಡಿಯಾ ನ್ಯಾನೋ- 2022 ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ನ್ಯಾನೋ ತಾಂತ್ರಿಕತೆಯನ್ನು ಸೃಷ್ಟಿಸುವ ಆರ್ ಎಂಡ್ ಡಿ, ಶಿಕ್ಷಣ ಸಂಸ್ಥೆ ಹಾಗೂ ವ್ಯಕ್ತಿಗಳ ನಡುವೆ ಸಮನ್ವಯದಿಂದ ದೊಡ್ಡ ಮಟ್ಟದಲ್ಲಿ ನ್ಯಾನೋ ಕ್ಷೇತ್ರದಲ್ಲಿ ಸಂಶೋಧನೆಗಳು ಆಗಬೇಕಿದೆ. ಈ ನಿಟ್ಟಿನಲ್ಲಿ 3 ದಿನ ಕಾರ್ಯಕ್ರಮ ನ್ಯಾನೋ ಟೆಕ್ನಾಲಜಿ ಕ್ಷೇತ್ರದಲ್ಲಿ ಸಂಶೋಧನೆಗಳಾಗಲು ಅನುಕೂಲವಾಗುತ್ತದೆ ಎಂದರು
ಮಾನವನಿಗೆ ಒಗ್ಗಿಕೊಳ್ಳುವಿಕೆಯ ಗುಣವಿದೆ, ಈ ಗುಣವೇ ಮಾನವನಿಗೆ ಸ್ಥಿರತೆ ಹಾಗೂ ಅವಕಾಶಗಳನ್ನು ನೀಡಿದೆ. ನಮ್ಮಲ್ಲಿ ಲಭ್ಯವಿರುವ ಸಂಪನ್ಮೂಲ, ಶಕ್ತಿಯ ಅತಿ ಸಣ್ಣ ರೂಪವಾದ ಅಣುವಿನ ಸೃಷ್ಟಿ ಹಾಗೂ ಅನ್ವೇಷಣೆಯ ಅಂಶವನ್ನು ನ್ಯಾನೋ ತಾಂತ್ರಿಕತೆ ಒಳಗೊಂಡಿದೆ ಎಂದರು.
ಬೆಂಗಳೂರು ನ್ಯಾನೋ ತಾಂತ್ರಿಕತೆಯ ಗಮ್ಯವಾಗಿಸುವ ನಿಟ್ಟಿನಲ್ಲಿ ನೀತಿ ನಿರೂಪಣೆ, ಆರ್ ಎಂಡ್ ಡಿ ನೀತಿ, ಡಿಜಿಟಲ್ ಗವರ್ನೆನ್ಸ್ ಗಳಿಂದ ಸಹಕಾರದಿಂದ ಹಾಗೂ ವಿಜ್ಞಾನ ಮತ್ತು ತಾಂತ್ರಿಕತೆಯ ಸಹಾಯದಿಂದ ಜನರ ಜೀವನವನ್ನು ಸುಗಮಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 180 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳಿವೆ. ಸಂಶೋಧನೆಗೆ ವಿಫುಲ ಅವಕಾಶಗಳಿವೆ. ವೈಜ್ಞಾನಿಕ ದೃಷ್ಟಿಕೋನವಿರುವ ಪ್ರಧಾನಮಂತ್ರಿಯವರು ನ್ಯಾನೋ ಯೂರಿಯಾದ ಸಂಶೋಧನೆಗೆ ಒತ್ತು ನೀಡಿದ್ದು, ರಾಜ್ಯದಲ್ಲಿ ಬೆಳೆಯುವ ಬೆಳೆಗಳ ಮೇಲೆ ಪ್ರಾಯೋಗಿಕವಾಗಿ ಬಳಸಲಾಗುತ್ತದೆ. ಜನರ ಜೀವನ ಸುಧಾರಿಸಲು ಪ್ರಧಾನಿಯವರು ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ್ ಯೋಜನೆಗಳೂ ಸಹಕರಿಸುತ್ತವೆ. ಸಿ.ಎನ್. ಆರ್. ರಾವ್ ಅವರ ನೇತೃತ್ವದಲ್ಲಿ ಈ ಕಾರ್ಯವನ್ನು ಅನುಷ್ಠಾನಗೊಳಿಸಲಾಗುವುದು ಎಂದರು. ಪ್ರೊ.ಸಿ.ಎನ್.ಆರ್ ರಾವ್ ಅವರ ನೇತೃತ್ವದಲ್ಲಿ ನ್ಯಾನೋ ಟೆಕ್ನಾಲಜಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದು, ಅವರ ಸೇವೆಗಳನ್ನು ರಾಜ್ಯ ಗುರುತಿಸುತ್ತದೆ ಎಂದರು.