ಚಿಕ್ಕಮಗಳೂರು: ಇಹಲೋಕ ತ್ಯಜಿಸಿರುವ ಅರೆಸ್ಸೆಸ್ ಕಾರ್ಯಕರ್ತ, ಪ್ರಗತಿಪರ ಕೃಷಿಕ ಚಿಕ್ಕಮಗಳೂರಿನ ತಿಮ್ಮೇಗೌಡರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಇಂದು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿತು.
ಸಿ.ಟಿ.ರವಿ ಅವರ ಸ್ವಗ್ರಾಮ ಚಿಕ್ಕಮಗಳೂರು ಸಮೀಪದ ಚಿಕ್ಕಮಾಗರವಳ್ಳಿಯಲ್ಲಿ ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ವಿವಿಧ ಧರ್ಮಗಳ ಪ್ರಮುಖರು, ಧರ್ಮಗುರುಗಳು, ಸ್ವಾಮೀಜಿಗಳು, ಆರೆಸ್ಸೆಸ್ ಧುರೀಣರು ಸೇರಿದಂತೆ ಸಾವಿರಾರು ಮಂದಿ ಅಂತ್ಯ ಸಂಸ್ಕಾರ ವೇಳೆ ಉಪಸ್ಥಿತರಿದ್ದು ಗೌರವ ಸಲ್ಲಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಬಿಜೆಪಿ ನಾಯಕರು ಅಂತ್ಯ ಸಂಸ್ಕಾರದ ಕೊನೆಯ ಕ್ಷಣದವರೆಗೂ ಹಾಜರಿದ್ದು ಸಿ.ಟಿ.ರವಿ ಕುಟುಂಬದ ಜೊತೆ ದುಃಖ ಹಂಚಿಕೊಂಡರು.
ಇದಕ್ಕೂ ಮುನ್ನ, ಕಳೆದ ರಾತ್ರಿಯಿಂದಲೇ ಸಾವಿರಾರು ಮಂದಿ ಅಭಿಮಾನಿಗಳು, ಬಂಧುಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಶ್ರದ್ಧಾಂಜಲಿಯ ಮಹಾಪೂರವೇ ಹರಿದುಬಂತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ತಂದೆ ತಿಮ್ಮೇಗೌಡರು (92 ವರ್ಷ) ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಶನಿವಾರ ಅವರು ಇಹಲೋಕ ತ್ಯಜಿಸಿದ್ದರು.
ಸಂಘಪರಿವಾರದ ಚಟುವಟಿಕೆಗಳಿಗಾಗಿ ತಮ್ಮ ಮಕ್ಕಳನ್ನು ಸೇನಾನಿಗಳಾಗಿ ಕಳುಹಿಸಿಕೊಟ್ಟವರು ತಿಮ್ನೇಗೌಡರು. ಅವರ ನಿಧನದ ಸುದ್ದಿ ಬಿಜೆಪಿ ಮಾತ್ರವಲ್ಲ, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರಲ್ಲೂ ದುಃಖ ಮಡುಗಟ್ಟುವಂತೆ ಮಾಡಿದೆ. ಮಾಜಿ ಪ್ರಧಾನಿ ದೇವೇಗೌಡರಾದಿಯಾಗಿ ಎಲ್ಲಾ ಪಕ್ಷಗಳ ರಾಜಕೀಯ ನಾಯಕರ ಜೊತೆ ಒಡನಾಟ ಹೊಂದಿದ್ದ ತಿಮ್ಮೇಗೌಡರ ನಿಧನಕ್ಕೆ ಕಂಬನಿಯ ಮಹಾಪೂರವೇ ಹರಿದು ಬಂತು.
ಮುನಿರತ್ನ, ಬೈರತಿ ಬಸವರಾಜ್ ಸಹಿತ ಮಂತ್ರಿಗಳು, ಕುಮಾರಸ್ವಾಮಿ ಸಹಿತ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರನೇಕರು ಸಿ.ಟಿ.ರವಿ ಅವರ ನಿವಾಸದಲ್ಲಿ ಅವರ ತಂದೆಯ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಿದರು. ಸಿ.ಟಿ.ರವಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.