ಬೆಂಗಳೂರು: ರಾಜ್ಯ ಕಮಲ ಸರ್ಕಾರದಲ್ಲಿ ತಳಮಳದ ಪರಿಸ್ಥಿತಿ ನಿರ್ಮಾಣವಾದಂತಿದೆ. ಹಿರಿಯ ಸಚಿವರ ವಿರುದ್ಧ ಸಮರ ಸಾರಿರುವ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಂದು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ರೂಪಿಸಿದ ಸಮರತಂತ್ರ ರಾಜ್ಯ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗೆ ಮುನ್ನುಡಿ ಬರೆದಿದೆ.
ಶೀಘ್ರವೇ ಹಿರಿಯ ಶಾಸಕರನ್ನು ಕೈಬಿಡಬೇಕು, ಹೊಸಬರಿಗೆ ಸ್ಥಾನ ನೀಡಿ ಸಂಪುಟ ಪುನರಚಿಸಬೇಕೆಂದು ವರಿಷ್ಠರನ್ನು ಒತ್ತಾಯಿಸುವ ಸಂಬಂಧ ಈ ನಾಯಕರು ರಣತಂತ್ರ ರೂಪಿಸಿದ್ದಾರೆನ್ನಲಾಗಿದರ.
ಸಭೆಯ ಬಳಿಕ ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಹಿರಿಯ ಸಚಿವರ ಬಗೆಗಿನ ಮುನಿಸನ್ನು ಅನಾವರಣ ಮಾಡಿದರು.
ಇದನ್ನೂ ಓದಿ.. ಒಂದೂವರೆ ತಾಸು ಯತ್ನಾಳ್-ರೇಣುಕಾಚಾರ್ಯ ಮಾತುಕತೆಯ ರಹಸ್ಯ ಇಲ್ಲಿದೆ..?
ಪಕ್ಷದಲ್ಲಿರುವ ಎಲ್ಲಾ ಶಾಸಕರು ಮಾತನಾಡಲು ಆಗುತ್ತಿಲ್ಲ, ಇದನ್ನು ಅನೇಕರು ನಮ್ಮ ಬಳಿ ಹೇಳಿದ್ದಾರೆ, ಹೀಗಾಗಿ ನಾವಿಬ್ಬರು ಸಚಿವ ಸಂಪುಟದ ಬಗ್ಗೆ ಮಾತಾಡಿದ್ದೇವೆ ಬಿಜೆಪಿಯಲ್ಲಿ ಸಹಿ ತೆಗೆದುಕೊಳ್ಳುವ ಸಂಸ್ಕೃತಿ ಇಲ್ಲ ಎಂದು ರೇಣುಕಾಚಾರ್ಯ ಹೇಳಿದರು. ಕಾಲ ಬಂದರೆ, ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವುದಾಗಿ ತಿಳಿಸಿದರು,
ಮಾರ್ಚ್ ತಿಂಗಳು ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನರಾಚನೆ ಆಗಿ ಮಂತ್ರಿ ಸ್ಥಾನ ಕೊಟ್ಟರೆ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ , ಸರ್ಕಾರ ಮತ್ತು ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳು ಒಳ್ಳೆ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ,, ನಮ್ಮ ಸ್ನೇಹಿತರು ಹಾಗೂ ಆತ್ಮೀಯರು ಆಗಿರುವ ಎಂ.ಪಿ.ರೇಣುಕಾಚಾರ್ಯ ಮಂತ್ರಿಯಾಗಲಿ ಎಂದು ಆಶೀರ್ವಾದ ಮಾಡುತ್ತೇನೆ ಎಂದ ಅವರು, ಯಾರಾದರೂ ನಾಯಕತ್ವ ಒಪ್ಪಿಕೊಂಡರೆ ಅವರ ನಾಯತ್ವದ ಜೊತೆ ಇರುತ್ತಾರೆ ಎಂದರು.
ಪಕ್ಷದ ಹೈಕಮಾಂಡ್ ಯಾವ ರೀತಿ ಬದಲಾವಣೆ ಮಾಡುತ್ತದೆ ಎಂಬುದನ್ನು ಕಾದು ನೋಡೋಣ. ಗುಜರಾತ್ ಮಾದರಿಯಲ್ಲಿ ಮಾಡುತ್ತೋ ಅಥವಾ ಕರ್ನಾಟಕಕ್ಕೆ ಬೇರೆ ಮಾದರಿಯೋ ಗೊತ್ತಿಲ್ಲ. ಸಚಿವ ಸಂಪುಟ ಪುರ್ನ ರಚನೆ ಇನ್ನು 15 ದಿನಗಳಲ್ಲಿ ಆದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಮಾರ್ಚ್ ತಿಂಗಳ ನಂತರ ಸಚಿವ ಸಂಪುಟ ರಚನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್ ಅವರು, ಅವಾಗ ಆದರೆ ಏನು ಉಪಯೋಗ ಇಲ್ಲ, ಮಾಡುವುದಾದರೆ ಇವಾಗಲೇ ಮಾಡಲಿ.ಕೊನೆ ಪಕ್ಷ ಒಂದು ವರ್ಷ ಇದ್ದಾಗ ಮಾಡಿದರೆ, ಪರಿಣಾಮಕಾರಿಯಾಗಿ ಅಭಿವೃದ್ಧಿ ಮಾಡಬಹುದು ಎಂದು ಪ್ರತಿಪಾದಿಸಿದರು.