ಬೆಂಗಳೂರು: ಯಡಿಯೂರಪ್ಪ ವಿರುದ್ದ ಸಮರ ಸಾರಿದ್ದ ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಹಾಗೂ ಬಿಎಸ್‌ವೈ ಅವರ ಪರಮಾಪ್ತ ನಾಯಕ ಎಂ.ಪಿ.ರೇಣುಕಾಚಾರ್ಯ ಪರಸ್ಪರ ಹಾವು-ಮುಂಗುಸಿ ರೀತಿ ಇದ್ದಿದ್ದಂತೂ ಸತ್ಯ. ಆದರೀಗ ಈ ಇಬ್ಬರೂ ನಾಯಕರು ಸ್ನೇಹ ಪರ್ವಕ್ಕೆ ಮುನ್ನುಡಿ ಬರೆದಂತಿದೆ. ಮಂತ್ರಿಗಿರಿ ಪಡೆಯಲು ತೆರೆಮರೆಯ ಕಸರತ್ತಿನಲ್ಲಿ ತೊಡಗಿರುವ ರೇಣುಕಾಚಾರ್ಯ ಅವರು ಬೆಂಗಳೂರಿನಲ್ಲಿಂದು ಯತ್ನಾಳ್ ಹೊತೆ ಸುದೀರ್ಘ ಹೊತ್ತು ರಹಸ್ಯ ಮಾತುಕತೆ ನಡೆಸಿ ಕಮಲ ಪಾಳಯದಲ್ಲಿನ ಬೆಳವಣಿಗೆಯ ಕುತೂಹಲವನ್ನು ಹೆಚ್ಚಿಸಿದ್ದಾರೆ. ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಂಡರೇ ಎಂಬ ಚರ್ಚೆಗಳೂ ಬಿಜೆಪಿ ಕಚೇರಿಯ ಪಡಸಾಲೆಯಲ್ಲಿ ಪ್ರತಿಧ್ವನಿಸಿದೆ.
ಎಂ.ಪಿ.ರೇಣುಕಾಚಾರ್ಯ ಹಾಗೂ ಕೇಂದ್ರದ ಮಾಜಿ ಸಚಿವ ಬಸನಗೌಡಪಾಟೀಲ್ ಯತ್ನಾಳ್ ಅವರು ವಿಕಾಸಸೌಧದಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವ ರೇಣುಕಾಚಾರ್ಯ ಅವರ ಕಚೇರಿಯಯ ಈ ಭೇಟಿಗೆ ಸಾಕ್ಷಿಯಾಯಿತು. ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಉಭಯ ನಾಯಕರು ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಕುರಿತು ಮಾತುಕತೆ ನಡೆಸಿರುವುದು ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.
ಸದ್ಯವೇ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳಿವೆ. ಸಚಿವರಲ್ಲಿ ಕೆಲವರಿಗೆ ಕೊಕ್ ನೀಡಿ ಹೊಸಬರಿಗೆ ಅವಕಾಶ ಕಲ್ಪಿಸಲು ಪಕ್ಷದ ಮುಖಂಡರು ಸಲಹೆ ಮಾಡಿದ್ದಾರೆಂಬ ಮಾತುಗಳೂ ಹರಿದಾಡುತ್ತಿವೆ. ಈ ಸಂದರ್ಭದಲ್ಲೇ ಈ ಇಬ್ಬರು ಮಾತುಕತೆ ನಡೆಸಿರುವುದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
👉 ಇದನ್ನೂ ಓದಿ.. ಯತ್ನಾಳ್-ರೇಣುಕಾಚಾರ್ಯ ಡಿಮಾಂಡ್ ಏನು ಗೊತ್ತಾ..?
ಈ ಹಿಂದೆ 2006 , 2008ರಿಂದ 2013 ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿರುವ ಹಿರಿಯರನ್ನು ಕೈ ಬಿಟ್ಟು ಪಕ್ಷ ನಿಷ್ಠರಿಗೆ ಮಂತ್ರಿ ಆಗುವ ಅವಕಾಶ ಕಲ್ಪಿಸಬೇಕೆಂಬ ವಿಚಾರದಲ್ಲಿ ಈ ಇಬ್ಬರು ನಾಯಕರೂ ಸಹಮತದ ನಿಲುವು ಹೊಂದಿದ್ದಾರೆ. ಈ ಸಂಬಂಧ ಸಿಎಂ ಬಳಿ ಒತ್ತಡ ಹೇರುವ ತಂತ್ರಗಾರಿಕೆಯಲ್ಲಿ ಉಭಯ ನಾಯಕರು ತೊಡಗಿದ್ದರೆಂದೂ ಹೇಳಲಾಗುತ್ತಿದೆ.
ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಸಚಿವರಾಗಿರುವವರನ್ನು ಪಕ್ಷದ ಸಂಘಟನೆಗೆ ನಿಯೋಜಿಸಬೇಕು.ಗುಜರಾತ್‍ನಂತೆ ಮುಖ್ಯಮಂತ್ರಿ ಹೊರತುಪಡಿಸಿ ಇಡೀ ಸಂಪುಟವನ್ನೇ ಬದಲಾಯಿಸಿ ಪಕ್ಷ ನಿಷ್ಠರು ಹಾಗೂ ಹೊಸಬರಿಗೆ ಅವಕಾಶ ಕೊಟ್ಟರೆ ಚುನಾವಣೆಯಲ್ಲಿ ಗೆಲ್ಲಲು ಅನುಕೂಲವಾಗುತ್ತದೆ, ಪಕ್ಷದ ಪ್ರಮುಖರ ಗಮನಕ್ಕೆ ತರಬೇಕೆಂದು ಉಭಯ ನಾಯಕರು ಪರಸ್ಪರ ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೂ ಸಚಿವ ಸಂಪುಟ ಪುನರಾಚರನೆಗೂ ಸಂಬಂಧವೇ ಇಲ್ಲ. ಸದ್ಯದಲ್ಲಿ ಬಿಬಿಎಂಪಿ, ನಂತರ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಜರುಗಲಿವೆ. ಪದೇ ಪದೇ ವಿಳಂಬ ಮಾಡುವುದರಿಂದ ಸಂಘಟನೆಗೆ ಹಿನ್ನೆಡೆಯಾಗಿದೆ. ಇದು ಚುನಾವಣೆ ವರ್ಷವಾಗಿರುವುದರಿಂದ ಪಕ್ಷ ನಿಷ್ಠ ಹಾಗೂ ಹೊಸಬರಿಗೆ ಅವಕಾಶ ಮಾಡಿಕೊಡಲು ಪಕ್ಷದ ಪ್ರಮುಖರಿಗೆ ಮನವಿ ಮಾಡಬೇಕೆಂದು ಚರ್ಚಿಸಿರುವುದಾಗಿ ತಿಳಿದುಬಂದಿದೆ.
ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್, ಮೊದಲು ಕೊರೊನಾ ಸಮರ್ಥವಾಗಿ ಎದುರಿಸಬೇಕು.ಸಚಿವ ಸಂಪುಟ ರಚನೆಯಲ್ಲಿ ಅವಕಾಶ ಸಿಗುವ ಬಗ್ಗೆವ ನಾನು ಏನು ಹೇಳಲು ಆಗುವುದಿಲ್ಲ ಎಂದರು. ಸಂಪುಟ ವಿಸ್ತರಣೆಯು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದ ಮೇಲೆ ಆಗುತ್ತದೆಯೋ ಅಥವಾ ಅದಕ್ಕಿಂತ ಮೊದಲೇ ಆಗುತ್ತದೆ ನೋಡೋಣ.ಆದರೆ ಒಳ್ಳೆಯ ಬೆಳವಣಿಗೆ ಆಗುತ್ತದೆ ಎಂದರು.
ನಮ್ಮ ಸ್ನೇಹಿತರು ಹಾಗೂ ಆತ್ಮೀಯರು ಆಗಿರುವ ಎಂ.ಪಿ.ರೇಣುಕಾಚಾರ್ಯ ಮಂತ್ರಿಯಾಗಲಿ ಎಂದು ಆಶೀರ್ವಾದ ಮಾಡುತ್ತೇನೆ ಎಂದ ಅವರು, ಯಾರಾದರೂ ನಾಯಕತ್ವ ಒಪ್ಪಿಕೊಂಡರೆ ಅವರ ನಾಯತ್ವದ ಜೊತರ ಇರುತ್ತಾರೆ ಎಂದರು.
ಪಕ್ಷದ ಹೈಕಮಾಂಡ್ ಯಾವ ರೀತಿ ಬದಲಾವಣೆ ಮಾಡುತ್ತದೆ ಎಂಬುದನ್ನು ಕಾದು ನೋಡೋಣ. ಗುಜರಾತ್ ಮಾದರಿಯಲ್ಲಿ ಮಾಡುತ್ತೋ ಅಥವಾ ಕರ್ನಾಟಕಕ್ಕೆ ಬೇರೆ ಮಾದರಿಯೋ ಗೊತ್ತಿಲ್ಲ. ಸಚಿವ ಸಂಪುಟ ಪುರ್ನ ರಚನೆ ಇನ್ನು 15 ದಿನಗಳಲ್ಲಿ ಆದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಮಾರ್ಚ್ ತಿಂಗಳ ನಂತರ ಸಚಿವ ಸಂಪುಟ ರಚನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್ ಅವರು, ಅವಾಗ ಆದರೆ ಏನು ಉಪಯೋಗ ಇಲ್ಲ, ಮಾಡುವುದಾದರೆ ಇವಾಗಲೇ ಮಾಡಲಿ.ಕೊನೆ ಪಕ್ಷ ಒಂದು ವರ್ಷ ಇದ್ದಾಗ ಮಾಡಿದರೆ, ಪರಿಣಾಮಕಾರಿಯಾಗಿ ಅಭಿವೃದ್ಧಿ ಮಾಡಬಹುದು ಎಂದು ಪ್ರತಿಪಾದಿಸಿದರು.
ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಮುಂದೆ ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ಬರಬೇಕು ಎನ್ನುವ ಸದುದ್ದೇಶದಿಂದ ಮಾತುಕತೆ ನಡೆಸಿದ್ದೇವೆ ಎಂದರು.
ಸಂಪುಟ ಪುನರ್ ರಚನೆ ಬಗ್ಗೆ, ಪ್ರತಿಕ್ರಿಯಿಸಿದ ಅವರು, ಈ ಸಭೆ ಯಾರ ವಿರುದ್ಧವೂ ನಡೆಸಿಲ್ಲ, ನಮಗೆ ವೈಯಕ್ತಿಕವಾಗಿ ಯಾರ ಮೇಲೂ ಆಕ್ರೋಶವೂ ಇಲ್ಲ, ಸಂಘಟನೆ ಹಾಗೂ ಸರ್ಕಾರಕ್ಕೆ ಯಾರು ಒಳ್ಳೆಯ ಕೆಲಸ ಮಾಡಿದವರೂ ಅವರನ್ನು ಮುಂದುವರೆಸುವುದು ಒಳ್ಳೆಯದು ಎಂದರು.
ಪದೇ ಪದೇ ಅಧಿಕಾರ ವಹಿಸಿರುವವರನ್ನು ಹಾಗೂ ಸ್ವಾರ್ಥಕೋರರನ್ನು ಕೈ ಬಿಡಬೇಕು ಎಂದ ಅವರು, ನಾವು ಯಾರ ಹೆಸರನ್ನೂ ಕೂಡ ಹೇಳುವುದಿಲ್ಲ ಎಂದರು. ಅಗತ್ಯವಿದ್ದರೆ ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡುತ್ತೇವೆ ಜೊತೆಗೆ ಸಿಎಂ ಬಸವರಾಜಬೊಮ್ಮಾಯಿ ಅವರ ಜೊತೆಗೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ, ಇದರಲ್ಲಿ ನಮಗೆ ಯಾವ ಸಂಕೋಚವೂ ಇಲ್ಲ , ಮುಂದಿನ ಬಾರಿ ಬಿಜೆಪಿ ದೇಶ ಹಾಗೂ ರಾಜ್ಯದಲ್ಲಿ ಅಕಾರಕ್ಕೆ ಬರಬೇಕೆಂಬುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಪಕ್ಷದಲ್ಲಿರುವ ಎಲ್ಲಾ ಶಾಸಕರು ಮಾತನಾಡಲು ಆಗುತ್ತಿಲ್ಲ, ಇದನ್ನು ಅನೇಕರು ನಮ್ಮ ಬಳಿ ಹೇಳಿದ್ದಾರೆ, ಹೀಗಾಗಿ ನಾವಿಬ್ಬರು ಸಚಿವ ಸಂಪುಟದ ಬಗ್ಗೆ ಮಾತಾಡಿದ್ದೇವೆ ಬಿಜೆಪಿಯಲ್ಲಿ ಸಹಿ ತೆಗೆದುಕೊಳ್ಳುವ ಸಂಸ್ಕೃತಿ ಇಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅತ್ಯಂತ ಅನುಭವಿ ರಾಜಕಾರಣಿಗಳು, ಅವರು ಈ ಹಿಂದೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ, ಅಂತಹವರು ಸಂಪುಟದಲ್ಲಿ ಇರಬೇಕೆಂಬುದು ನನ್ನ ಆಸೆ, ಅವರು ಮಂತ್ರಿಯಾಗಲಿ ಅಂತ ಶುಭಕೋರುತ್ತೇನೆ, ಕಾಲ ಬಂದರೆ, ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವುದಾಗಿ ವಿವರಿಸಿದರು,
ಮಾರ್ಚ್ ತಿಂಗಳು ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನರಾಚನೆ ಆಗಿ ಮಂತ್ರಿ ಸ್ಥಾನ ಕೊಟ್ಟರೆ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ , ಸರ್ಕಾರ ಮತ್ತು ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳು ಒಳ್ಳೆ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.