ಮಂಗಳೂರು: ದಕ್ಷಿಣ ಭಾರತ ಪರ್ಯಟನೆ ಕೈಗೊಂಡಿರುವ ನಾಗಸಾಧುಗಳ ಸಮೂಹವೊಂದು ಆಸ್ತಿಕರ ಗಮನಸೆಳೆದಿದೆ. ಕೆಲವು ದಿನಗಳಿಂದ ಬೆಂಗಳೂರು ಸುತ್ತಮುತ್ತ ವಿವಿಧ ಕೈಂಕರ್ಯಗಳಲ್ಲಿ ಭಾಗಿಯಾಗುತ್ತಿರುವ ಈ ನಾಗಸಾಧುಗಳು ಕರಾವಳಿ ಭಾಗದ ದೇವಾಲಯ, ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ. ಬಂಟ್ವಾಳ ಸಮೀಪದ ಪುರಾಣ ಪ್ರಸಿದ್ದ ಕಾರಿಂಜೆ ಕ್ಷೇತ್ರದಲ್ಲಿ ಈ ಸಂತಶ್ರೇಷ್ಠರಿಗೆ ಗುರುನಮನ ಕಾರ್ಯಕ್ರಮ ಏರ್ಪಾಡಾಗಿದ್ದು ಈ ಸಮಾರಂಭದ ಸಿದ್ದತೆಗಳೂ ಗಮನಕೇಂದ್ರೀಕರಿಸಿದೆ.
ಮಂಗಳೂರು ಸಮೀಪದ ಬೆಳ್ಳೂರಿನಲ್ಲಿ ಹುಟ್ಟಿ, ಬದಲಾದ ಪರಿಸ್ಥಿತಿಯಲ್ಲಿ ಆಧ್ಯಾತ್ಮ ಕ್ಷೇತ್ರವನ್ನು ಆಯ್ಕೆ ಮಾಡಿರುವ ನಾಗಸಾಧು, ತಪೋನಿಧಿ ಬಾಬಾ ಶ್ರೀ ವಿಠ್ಠಲ್ ಗಿರಿ ಮಹಾರಾಜ್ ಜಿ (ನಾಗಾಸಾಧು ತಪೋನಿಧಿ ಆನಂದ್ ಅಖಾಡ) ಈ ಸಂತರ ಗುಂಪಿನಲ್ಲಿದ್ದಾರೆ. ಅವರೊಂದಿಗೆ ಅಷ್ಟ ಕೌಶಲ್ ಮಹಂತ್ ಬಾಬಾ ಶ್ರೀ ರಾಹುಲ್ ಗಿರಿ ಮಹಾರಾಜ್ ಜಿ (ನಾಗಾಸಾಧು ಆಹ್ವಾಹನ್ ಅಖಾಡ), ಬಾಬಾ ಶ್ರೀ ಬಿಶಂಬರ್ ಭಾರತಿ ಜಿ (ನಾಗಾಸಾಧು ಜೂನ ಅಖಾಡ) ಕೂಡಾ ಪ್ರಮುಖರಾಗಿದ್ದಾರೆ.
ಹರಿದ್ವಾರದಲ್ಲಿ ಆಶ್ರಮ ಹೊಂದಿರುವ ಬಾಬಾ ಶ್ರೀ ವಿಠ್ಠಲ್ ಗಿರಿ ಮಹಾರಾಜ್ ಜಿ ಅವರು ದೀಕ್ಷೆ ಪಡೆದ ನಂತರ ಮೊದಲ ಬಾರಿಗೆ ಪೂರ್ವಾಶ್ರಮದ ಊರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇದಕ್ಕಾಗಿ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಆಸ್ತಿಕರು ‘ತಪೋನಿಧಿ ನಾಗಸಾಧು ಬಾಬಾ ಶ್ರಿ ವಿಠಲ್ ಗಿರಿ ಮಹಾರಾಜ್ ಭಕ್ತವೃಂದ ಗುರುವಂದನಾ ಸಮಿತಿ’ ಎಂಬ ಸಮಿತಿಯನ್ನೂ ರಚಿಸಿ ಕಾರ್ಯೋನ್ಮುಖರಾಗಿದ್ದಾರೆ.
ಬಾಬಾ ಶ್ರೀ ವಿಠ್ಠಲ್ ಗಿರಿ ಮಹಾರಾಜ್ ಜಿ ಅವರು ಪೂರ್ವಾಶ್ರಮದಲ್ಲಿ ಹಲವಾರು ವರ್ಷಗಳಿಂದ ಹಿಂದೂ ಧರ್ಮಗೋಸ್ಕರ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡು, ಕಳೆದ 2 ವರುಷಗಳಿಂದ ದೂರದ ತಪೋ ಭೂಮಿ ಹರಿದ್ವಾರ -ಕೇದರನಾಥ ಭಾಗಗಳಲ್ಲಿ ಹಿರಿಯ ನಾಗಸಾಧು ಗುರುವಿನ ಮಾರ್ಗದರ್ಶನ ದಲ್ಲಿ ನಾಗ ಸಾಧು ದೀಕ್ಷೆಯನ್ನು ಪಡೆದು ಆದ್ಯಾತ್ಮ ಕ್ಷೇತ್ರದಲ್ಲಿ ಸಾಧನೆ ಗೈದಿದ್ದಾರೆ ಎಂಬುದು ಅವರ ಭಕ್ತರ ಹೇಳಿಕೆ. ಈ ಯತಿಗಳಿಗಾಗಿ ಶ್ರೀ ಕ್ಷೇತ್ರ ಕಾರಿಂಜದಲ್ಲಿ ಈ ತಿಂಗಳ 27ರ ಸೋಮವಾರದಂದು ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಭಕ್ತರು ಗುರುವಂದನೆ ನೆರವೇರಿಸಲಿದ್ದಾರೆ. ಅಂದು ಬೆಳಿಗ್ಗೆ 11.00 ಗಂಟೆಗೆ ಗುರು ಪೂಜ ಕಾರ್ಯಕ್ರಮ ಆಯೋಜಿತವಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ, ಅಂದು ಬೆಳಿಗ್ಗೆ 8.00 ಗಂಟೆಗೆ ಕಾರಿಂಜ ಕ್ರಾಸ್ ವಗ್ಗದಿಂದ ಭಜನೆ ಚೆಂಡೆ ವಾದ್ಯ ಕಲಶದೊಂದಿಗೆ ಶೋಭಾಯಾತ್ರೆ ನಡೆಯಲಿದೆ. ಬಳಿಕ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, 10 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಯುವ ವಾಗ್ಮಿ ಶಿವಮೊಗ್ಗದ ಭಾವನಾ ಆರ್.ಗೌಡರ್ ಅವರು ಬೌದ್ಧಿಕ್ ಮಾಡಲಿದ್ದಾರೆ. ಅನ್ನ ಸಂತರಗಪಣೆ ಸಹಿತ ವಿವಿಧ ಕೈಂಕರ್ಯಗಳೂ ನೆರವೇರಲಿದೆ ಎಂದು ಕಾರ್ಯಕ್ರಮ ಸಂಘಟಕರಾದ ಪದ್ಮನಾಭ ಪೂಜಾರಿ ತಿಳಿಸಿದ್ದಾರೆ.