ಬೆಂಗಳೂರು: ಸಮಾಜದ ಆರೋಗ್ಯ ಕಾಪಾಡುವಲ್ಲಿ ಮುಂಚೂಣಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರೇ ಇದೀಗ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಆಶಾಗಳು ತಮ್ಮ ನ್ಯಾಯುತ ಬೇಡಿಕೆಗಳ ಈಡೇರಿಕೆಗಾಗಿ ಸರಣಿ ಹೋರಾಟಗಳನ್ನು ನಡೆಸುತ್ತಿದ್ದರೂ ಸರ್ಕಾರ ಗಮನಹರಿಸಿಲ್ಲ. ಇದೀಗ ಮತ್ತೊಂದು ಹೋರಾಟದ ಸರಣಿಗೆ ಆಶಾ ಕಾರ್ಯಕರ್ತರು ಮುನ್ನುಡಿ ಬರೆದಿದ್ದಾರೆ. ತಮ್ಮ ಹಕ್ಕೊತ್ತಾಯ ಮಂಡಿಸಿ, ಸೋಮವಾರ ಬಿಬಿಎಂಪಿ ಕಚೇರಿ ಬಳಿ ಆಶಾ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಏನಿದು ಹೋರಾಟ..?
ಆಶಾ ಕಾರ್ಯಕರ್ತೆಯರು ಕಳೆದ ಒಂದೂವರೆ ವರ್ಷದಿಂದ ಕೊರೋನಾ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಗಟ್ಟುವಲ್ಲಿ ತಮ್ಮ ಜೀವದ ಹಂಗು ತೊರೆದು, ಕೊರೋನಾ ವಾರಿಯರ್ಸ್ ಆಗಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಹಾಗೆಯೇ ಜನರಿಗೆ ಕೋವಿಡ್ ಲಸಿಕೆ ಹಾಕಿಸುವಲ್ಲಿ, ಲಸಿಕೆ ಸುತ್ತುವರೆದ ವಿವಿಧ ರೀತಿಯ ಕೆಲಸಗಳನ್ನು ಹಗಲಿರುಳು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕೋವಿಡ್ ಕೆಲಸಗಳ ಜೊತೆಗೆ ಹಲವಾರು ಸಮೀಕ್ಷೆಗಳು, ಇವರ ಮೂಲ ಕೆಲಸಗಳಾದ ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ-ಶಿಶು ಆರೈಕೆಗಳ ಕುರಿತ ಸೇವೆಗಳು, ಗ್ರಾಮ ನೈರ್ಮಲ್ಯ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳನ್ನೂ ಸಹ ಮಾಡಬೇಕಾಗಿದೆ. ಆಶಾ ಕಾರ್ಯಕರ್ತೆ ದಿನಕ್ಕೆ 2 ಗಂಟೆ ಕೆಲಸ ಮಾಡಿದರಷ್ಟೇ ಸಾಕು ಎಂದು ಹೇಳಿ ಪ್ರಾರಂಭ ಮಾಡಿದ ಈಕೆಯ ಕೆಲಸವಿಂದು ದಿನವಿಡೀ ಮಾಡುವಂತಾಗಿದೆ.
ಜೊತೆಗೆ ಆಶಾ ಕಾರ್ಯಕರ್ತೆಯರಿಗೆ ನಿಗದಿ ಪಡಿಸಿದ ಕೆಲಸಗಳನ್ನು ಹೊರತು ಪಡಿಸಿ ವಿವಿಧ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತಾಯದಿಂದ ಆಶಾಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಮತ್ತೊಂದೆಡೆ ಆಶಾಗಳನ್ನು ತಮ್ಮ ಕೆಲಸದ ಏರಿಯಾ ಜೊತೆಗೆ ಬೇರೆ ಏರಿಯಾ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಕೋವಿಡ್-19 ಯೇತರ ಮತ್ತು ಕೋವಿಡ್-19 ನಿಯಂತ್ರಣ ಚಟುವಟಿಕೆಗಳಿಂದ ಹಾಗೂ ವಿವಿಧ ಕೆಲಸಗಳ ಅಧಿಕ ಒತ್ತಡದಿಂದ ಆಶಾಗಳ ಆರೋಗ್ಯ ಹದಗೆಡುವಂತಾಗಿದೆ. ಹಲವರು ಕೋವಿಡ್ ಸೋಂಕಿಗೆ ಒಳಗಾಗಿರುವರು.
ಹೀಗಿದ್ದರೂ, ತಿಂಗಳಿಡೀ ದುಡಿದು ಆಶಾನಿಧಿ/ಆರ್‍ಸಿಎಚ್ ಪೋರ್ಟಲ್‍ನಲ್ಲಿ ಆಶಾ ಮಾಡಿದ ಎಲ್ಲಾ ಚಟುವಟಿಕೆಗಳು ನಮೂದಾಗದೇ ಇರುವುದರಿಂದ ಅವರ ದುಡಿತಕ್ಕೆ ತಕ್ಕ ಪ್ರೋತ್ಸಾಹ ಧನ ಸಂಪೂರ್ಣವಾಗಿ ದೊರಕುತ್ತಿಲ್ಲ. ಕಳೆದ 3 ವರ್ಷಗಳಿಂದ ಆಶಾ ಕಾರ್ಯಕರ್ತೆಯರು ತಾವು ಕೆಲಸ ಮಾಡಿದಷ್ಟು ಪ್ರೋತ್ಸಾಹಧನ ಪಡೆಯಲು ಆಗುತ್ತಿಲ್ಲ. ಸಾವಿರಾರು ರೂ.ಗಳು ನಷ್ಟವನ್ನು ಅನುಭವಿಸಿದ್ದಾರೆ. ಡಿಬಿಟಿಯಿಂದ ಕೆಲವರಿಗೆ ಮಾಸಿಕ ಗೌರವಧನ ಬಂದಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ವಿರೋಧಿಸಿ ಹಾಗೂ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.
“ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್” (ಎಐಯುಟಿಯುಸಿ) ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯ ಕಾರ್ಯಕರ್ತರು ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಹಕ್ಕೊತ್ತಾಯಗಳು ಹೀಗಿವೆ:
- ಇಲಾಖೆಯ ಆದೇಶಗಳಂತೆ ಈ-ಸಂಜೀವಿನಿ, ಎನ್‍ಸಿಡಿ ಸರ್ವೆ, ಕ್ವಾರಂಟೈನ್ ಆ್ಯಪ್ ಮೂಲಕ ಕೆಲಸ, ಈ-ಸಮೀಕ್ಷೆ ಕೆಲಸಗಳನ್ನು ಆಶಾಗಳಿಂದ ಒತ್ತಾಯ ಪೂರ್ವಕವಾಗಿ ಮಾಡಿಸುತ್ತಿರುವುದನ್ನು ಕೈಬಿಡಿ.
ಆರ್.ಸಿ.ಹೆಚ್. ಪೋರ್ಟಲ್‍ನಲ್ಲಿ ಎ.ಎನ್.ಸಿ. ಹಾಗೂ ಪಿ.ಎನ್.ಸಿ ಇನ್ನಿತರ ಹಲವು ಆಶಾ ಕೆಲಸಗಳು ಡಾಟಾ ಎಂಟ್ರಿ ಆಗುತ್ತಿಲ್ಲ ಇದರಿಂದಾಗಿ ಆಶಾಗಳಿಗೆ ಕೆಲಸ ಮಾಡಿದಷ್ಟು ಪ್ರೋತ್ಸಾಹ ಧನ ಸಿಗುತ್ತಿಲ್ಲ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. - ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್, ಫೇಸ್ ಶೀಲ್ಡ್ ಗಳನ್ನು ನಿಯಮಿತವಾಗಿ ನೀಡಬೇಕು.
- ಪ್ರತೀ ತಿಂಗಳು ನಿರ್ದಿಷ್ಟ ದಿನಾಂಕದೊಳಗೆ ರಾಜ್ಯ ಹಾಗೂ ಕೇಂದ್ರದ ಪ್ರೋತ್ಸಾಹ ಧನ ಆಶಾಗಳಿಗೆ ದೊರೆಯುವಂತೆ ಮಾಡಬೇಕು.
- ಇಲಾಖೆಯ ಸುತ್ತೋಲೆಗಳಂತೆ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಕ್ಲೈಮ್ ರಿಪೋರ್ಟ್ ಮತ್ತು ರಿಲೀಸ್ ಕಾಪಿಗಳನ್ನು ಕಡ್ಡಾಯವಾಗಿ ನೀಡಬೇಕು.
- ಇಲಾಖೆಯ ಮಾರ್ಗಸೂಚಿಯಂತೆ ಖಾಲಿ ಇರುವ ಫೆಸಲಿಟೆಟರ್ ಸ್ಥಾನಗಳನ್ನು ಭರ್ತಿ ಮಾಡಿ ಹಾಗೂ ನಗರ ಪ್ರದೇಶಗಳಿಗೂ ಫೆಸಿಲಿಟೆಟರ್‍ಗಳನ್ನು ನೇಮಿಸಬೇಕು.
- ಕಫ ಪರೀಕ್ಷೆ ಸ್ಯಾಂಪಲ್ ತರಲು ಎಲ್ಲಾ ಕಡೆ ಆಶಾಗಳಿಗೆ ಒತ್ತಾಯಿಸಲಾಗುತ್ತಿದೆ. ಸುತ್ತೋಲೆಯಲ್ಲಿರುವಂತೆ ಆಶಾಗಳದ್ದಲ್ಲದ ಈ ಕೆಲಸವನ್ನು ಅವರಿಂದ ಮಾಡಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
- ಆಶಾಗೆ ನಿಗದಿಪಡಿಸಿದ ಕ್ಷೇತ್ರದಲ್ಲಿ ಮಾತ್ರ ಆಕೆ ಕೆಲಸ ಮಾಡಬೇಕು. ಬೇರೆ ಪ್ರದೇಶಗಳಿಗೆ ನಿಯೋಜಿಸಬಾರದುಎನ್ನುವ ಆದೇಶ ಪಾಲನೆ ಮಾಡಬೇಕು.
- ಕೋವಿಡ್-19 ನಿಯಂತ್ರಣ ಚಟುವಟಿಕೆಗಳಲ್ಲಿ ಡಾಟಾ ತುಂಬಿಸುವುದು, ಲಸಿಕಾ ಕೇಂದ್ರದಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವುದು, ಸ್ವಾಬ್ ತೆಗೆಯುವ ಕೇಂದ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಆಶಾಗಳನ್ನು ಭಾಗಿ ಮಾಡಿ ಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು.
- ಮೂರು ತಿಂಗಳಿಗೊಮ್ಮೆ ಆಶಾ ಕಾರ್ಯಕರ್ತೆಯರ ಕುಂದುಕೊರತೆ ನಿವಾರಣಾ ಸಭೆಯನ್ನು ಸಂಘಟಿಸುವುದರ ಬಗ್ಗೆ ಆದೇಶವಿದ್ದು ಅದರ ಬಗ್ಗೆ ಈ ಕೂಡಲೇ ಕ್ರಮ ಕೈಗೊಳ್ಳಬೇಕು.