ಮಂತ್ರಾಲಯ: ಪುಣ್ಯಕ್ಷೇತ್ರ ಮಂತ್ರಾಲಯದಲ್ಲಿ ಭಕ್ತಿ ವೈಭವ. ಗುರುರಾಯರ 350ನೇ ಆರಾಧನೆ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಭಕ್ತಿ ಕೈಂಕರ್ಯ ಮೇಳೈಸಲಿದೆ. ಆಗಸ್ಟ್ 21ರಿಂದ 27ರ ವರೆಗೆ ಏಳು ದಿನ ಸಪ್ತ ರಾತ್ರೋತ್ಸವ ನೆರವೇರಲಿದ್ದು ಅದಕ್ಕಾಗಿ ತಯಾರಿ ನಡೆದಿದೆ.
ಈ ಭಕ್ತಿ ಮಹೋತ್ಸವ ಕುರಿತು ಮಾಹಿತಿ ಹಂಚಿಕೊಂಡಿರುವ ಶ್ರೀ ಸುಭುದೇಂದ್ರ ತೀರ್ಥರು, ರಾಯರು ಬೃಂದಾವನ ಸೇರಿ 350 ವರ್ಷವಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ರಾಯರ ಆರಾಧನೆ ಮಹೋತ್ಸವ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದವರು ತಿಳಿಸಿದರು.
ಹಲವು ವಿಶೇಷತೆಗಳು..
ವಿಶೇಷ ಪೂಜೆ ಮಹಾಭಿಷೇಕ ನಡೆಯಲಿದೆ. ಜೊತೆಗೆ ಗುರು ರಾಯರಿಗೆ ತಿರುಪತಿ ವಸ್ತ್ರ ಸಮರ್ಪಿಸಲಾಗುತ್ತದೆ ಎಂದು ಶ್ರೀಗಳು ತಿಳಿಸಿದರು. ನವರತ್ನದ ಕವಚವನ್ನು ರಾಯರ ಮೂಲ ಬೃಂದಾವನಕ್ಕೆ ಅರ್ಪಿಸಲಾಗುತ್ತಿದೆ. ಬಂಗಾರದ ಆಭರಣಗಳನ್ನ ಮೂಲ ರಾಮ ದೇವರಿಗೆ ಸಮರ್ಪಣೆ ಮಾಡಲಾಗುತ್ತಿದೆ. ರಂಗ ಸಭಾಂಗಣದಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಲಾಗಿದೆ ಎಂದವರು ವಿವರಿಸಿದರು.
ಕೊರೊನಾ ಸಂಕಷ್ಟ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರಳವಾಗಿ ಆರಾಧನ ಮಹೋತ್ಸವ ನಡೆಸಲಾಗುತ್ತದೆ ಎಂದ ಸುಭುದೇಂದ್ರ ತೀರ್ಥರು, ರಾಯರ ದರ್ಶನಕ್ಕೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್ ನೀಡಲಾಗುವುದು. ಸ್ಯಾನಿಟೈಸರ್ ಮಾಡಲಾಗುವುದು ಎಂದರು. ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಸ್ಥಾಪಿಸಲಾಗಿದೆ ಎಂದರು.
ನದಿ ತೀರದಲ್ಲಿ ಸ್ನಾನಘಟ್ಟಗಳನ್ನ ನಿರ್ಮಿಸಲಾಗಿದ್ದು, ಅರಾಧನೆಗೆ ಬರುವ ಭಕ್ತರಿಗೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶ್ರೀಗಳು ಮಾಹಿತಿ ನೀಡಿದರು.
ಪರಿಮಳ ಪ್ರಸಾದದ ವ್ಯವಸ್ಥೆ ಸಹ ಮಾಡಲಾಗಿದೆ ಎಂದ ಅವರು, ವಯೋ ವೃದ್ಧರಿಗೆ ಶೀಘ್ರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದರು.







































































