ಬೆಂಗಳೂರು: ಈ ಸರ್ಕಾರದಲ್ಲೂ ಯಡಿಯೂರಪ್ಪ ಅವರೇ ಸೂಪರ್ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಒತ್ತಡದಿಂದಾಗಿ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಹೀಗಾಗಿ ಸಹಜವಾಗಿ ಬಸವರಾಜ ಬೊಮ್ಮಾಯಿಯವರು ಯಡಿಯೂರಪ್ಪನವರು ಹೇಳಿದಂತೆ ಕೇಳಿಕೊಂಡು ಅವರ ಪರವಾಗಿ ಕೆಲಸ ಮಾಡುತ್ತಾರೆ ಎಂದು ವಿಶ್ಲೇಷಣೆ ಮಾಡಿದರು.
ಬೊಮ್ಮಾಯಿಯವರು ನಾಮಕಾವಸ್ತೆ ಸಿಎಂ ಅಷ್ಟೆ ಎಂದು ಆಪಾದಿಸಿದ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆ ಎಂಬ ಭೀತಿಯಿಂದ ಸಿಎಂ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಾವಣೆ ಮಾಡಲಾಗಿದೆ ಎಂದರು. ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಮಾಡಿರುವುದರಿಂದ ಅದಕ್ಕೆ ಏನೂ ಪ್ರಯೋಜನವಾಗುವುದಿಲ್ಲ, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸೋಲುವುದು ಖಚಿತ ಎಂದವರು ಭವಿಷ್ಯ ನುಡಿದರು.