ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ಆಡಳಿತ ಮಾಡಿದ್ದ ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆ ಕೋವಿಡ್‍ನಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಸಹಾಯಹಸ್ತ ನೀಡುವ ಬದಲು ಕೇವಲ ಋಣಾತ್ಮಕವಾಗಿ ಟೀಕೆ ಟಿಪ್ಪಣಿ ಮಾಡುತ್ತಾ ಬಂದಿದೆ. ಅದರಲ್ಲೂ ಪ್ರಮುಖವಾಗಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ತಾನು ಆಯ್ಕೆಯಾದ ಕ್ಷೇತ್ರಕ್ಕೂ ಹೋಗದೆ ಕೇವಲ ಟ್ವಿಟರ್‍ಗೆ ಸೀಮಿತರಾಗಿ ರಾಜಕೀಯ ಟೀಕೆ ಮಾಡಲು ತಮ್ಮನ್ನು ತೊಡಗಿಸಿಕೊಂಡಿದ್ದನ್ನು ಇಂದಿನ ಸಭೆ ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಾಂಗ್ರೆಸ್ ಪಕ್ಷದ ಜನವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸುವ ನಿರ್ಣಯ ಅಂಗೀಕರಿಸಿದೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಣೇಶ್ ಕಾರ್ನಿಕ್, ಕಾಂಗ್ರೆಸ್ ನಾಯಕರ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕಾರಿಣಿ ಕುರಿತು ಮಾಹಿತಿ ಹಂಚಿಕೊಂಡ ಅವರು, ಕಳೆದ ಐದೂವರೆ ತಿಂಗಳಿನಲ್ಲಿ ನಮ್ಮನ್ನು ಅಗಲಿದ ನಾಡಿನ ಗಣ್ಯರು ಮತ್ತು ಕೋವಿಡ್ ಸಂದರ್ಭದಲ್ಲಿ ಅದಕ್ಕೆ ತುತ್ತಾಗಿ ಅಸುನೀಗಿದ ಕಾರ್ಯಕರ್ತರು ಮತ್ತು ಅವರ ಬಂಧುಗಳಿಗೆ ಸದ್ಗತಿ ಪ್ರಾಪ್ತಿಗೆ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಸಮರ್ಪಿಸಲಾಗಿದೆ. ಬೆಳಿಗ್ಗೆ ನಡೆದ ಸಭೆಯಲ್ಲಿ ಪ್ರಮುಖವಾಗಿ ಎರಡು ರಾಜಕೀಯ ನಿರ್ಣಯಗಳನ್ನು ಮಂಡಿಸಲಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡಿದೆ. ರಾಜ್ಯದಲ್ಲಿ ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿ ನೀಡುವ ಮಹತ್ವದ ನಿರ್ಧಾರದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಅಭಿನಂದಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ವಿವರಿಸಿದರು.
ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಮತ್ತು ದೌರ್ಜನ್ಯ ಮಾಡುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರಕಾರದ ಕ್ರಮಗಳು, ಅಲ್ಲಿನ ರಾಜ್ಯಪಾಲರ ಜೊತೆ ಮಮತಾ ಅವರು ನಡೆದುಕೊಂಡ ರೀತಿ, ಕೇಂದ್ರದ ಜೊತೆಗೆ ಅಸಹಕಾರವನ್ನು ಖಂಡಿಸುವ ಮತ್ತು ಅಲ್ಲಿ ಮೃತರಾದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಹಿಂಸೆ, ದೌರ್ಜನ್ಯವನ್ನು ಅನುಭವಿಸಿದ ಕುಟುಂಬಗಳಿಗೆ ನಾವು ನಿಮ್ಮ ಜೊತೆಗಿದ್ದೇವೆ ಎಂದು ತಿಳಿಸುವ ಹಾಗೂ ಕೇಂದ್ರ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸುವ ನಿರ್ಣಯವನ್ನು ಮಂಡಿಸಲಾಗಿದೆ ಎಂದರು.
ಇಂದಿನ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುವ ವಿವಿಧ ಜಿಲ್ಲೆಗಳ ಅಪೇಕ್ಷಿತರು ಜಿಲ್ಲೆಗಳಿಂದ ವೆಬೆಕ್ಸ್ ಮೂಲಕ ಭಾಗವಹಿಸುತ್ತಿದ್ದಾರೆ. ಇದೊಂದು ರೀತಿಯ ಹೈಬ್ರಿಡ್ ಸಭೆಯಾಗಿದೆ. ಕಾರ್ಯಕಾರಿಣಿಯನ್ನು ರಾಜ್ಯದ ಮುಖ್ಯಮಂತ್ರಿಗಳು ಮತ್ತು ನಮ್ಮ ನೆಚ್ಚಿನ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಗೃಹ ಕಛೇರಿಯಿಂದ ವೆಬೆಕ್ಸ್ ಮೂಲಕ ಭಾಗವಹಿಸಿ ಮಾರ್ಗದರ್ಶನ ಮಾಡಿ ಉದ್ಘಾಟನೆ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯದ ಉಸ್ತುವಾರಿಗಳೂ ಆದ ಅರುಣ್ ಸಿಂಗ್ ಅವರು ದೆಹಲಿಯಿಂದ ವೆಬೆಕ್ಸ್ ಮೂಲಕ ಭಾಗವಹಿಸಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ಅವರೂ ವೆಬೆಕ್ಸ್ ಮೂಲಕ ಭಾಗವಹಿಸಿದ್ದರು ಎಂದು ತಿಳಿಸಿದರು.
ಮಧ್ಯಾಹ್ನದ ಬಳಿಕ ಮುಂಬರುವ ಚುನಾವಣೆಗಳು, ಪಕ್ಷವು ಸೇವಾ ಹೀ ಸಂಘಟನ್ ಮೂಲಕ ಕೋವಿಡ್ ಮೂರನೇ ಅಲೆ ಎದುರಿಸುವ ಕುರಿತು ಚರ್ಚೆ ನಡೆದಿದೆ ಎಂದರು.