ಬೆಂಗಳೂರು: ಯಡಿಯೂರಪ್ಪ ಅವರ ಸಿಎಂ ಕುರ್ಚಿ ಅಲುಗಾಡಲು ಅವರ ವಿವಾದಾತ್ಮಕ ನಡೆ ಕಾರಣವಾಗುತ್ತಿದೆಯೇ? ಅಥವಾ ಆರೆಸ್ಸೆಸ್ ಪ್ರಮುಖರೇ ನಡೆಸುತ್ತಿರುವ ಕಾನೂನು ಸಮರದಿಂದಾಗುತ್ತಾ ಹಿನ್ನಡೆ? ಇಂಥದ್ದೊಂದು ಆತಂಕ ಬಿಎಸ್‌ವೈ ಆಪ್ತರನ್ನು ಕಾಡಲಾರಂಭಿಸಿದೆ.
ಪ್ರಸ್ತುತ ‘ಜಿಂದಾಲ್ ಜಮೀನು’ ವಿಚಾರದಲ್ಲಿ ಸರ್ಕಾರ ಏನೇ ನಿರ್ಧಾರ ಕೈಗೊಂಡರೂ ಕೋರ್ಟ್ ತೀರ್ಪೇ ಅಂತಿಮವಾಗಿರುತ್ತದೆ ಎಂಬ ಹೈಕೋರ್ಟ್ ನ್ಯಾಯಪೀಠದ ಅಭಿಪ್ರಾಯವು ಬಿಜೆಪಿ ಪಾಳಯದಲ್ಲೇ ಸಂಚಲನ ಸೃಷ್ಟಿಸಿದೆ.
ಏನಿದು ‘ಹೈ’ ಬೆಳವಣಿಗೆ..?
ಹಿಂದಿನ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿದ್ದ, ಈಗಿನ ನೂತನ ವಿಜಯನಗರ ಜಿಲ್ಲೆಗೆ ಸೇರಿರುವ, ಸಂಡೂರು ತಾಲೂಕಿನಲ್ಲಿ ಸುಮಾರು 3667 ಎಕರೆ ಜಮೀನನ್ನು ಜಿಂದಾಲ್ ಕಂಪನಿಗೆ ಅತ್ಯಲ್ಪ ದರದಲ್ಲಿ ಮಂಜೂರು ಮಾಡುವ ಬಗ್ಗೆ ಸರ್ಕಾರ ವಿವಾದಾತ್ಮಕ ತೀರ್ಮಾನ ಕೈಗೊಂಡಿದೆ.
ಹೆಚ್ಡಿಕೆ ಸರ್ಕಾರದ ಅವಧಿಯಲ್ಲಿ ಈ ಕುರಿತು ಪ್ರಕ್ರಿಯೆ ನಡೆದಾಗ ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಶಾಸಕರು ವಿರೋಧಿಸಿದ್ದರು. ಇದೀಗ ಅಧಿಕಾರಕ್ಕೆ ಬಂದಾಗ ಅದೇ ತೀರ್ಮಾನವನ್ನು ಯಡಿಯೂರಪ್ಪ ಸರ್ಕಾರ ಕೂಡಾ ಕೈಗೊಂಡಿದ್ದು ಇದರಿಂದಾಗಿ ಪಕ್ಷದ ಕಾರ್ಯಕರ್ತರೇ ಕೆರಳುವಂತಾಗಿದೆ.
ಕೋವಿಡ್ ಸಂದರ್ಭದಲ್ಲಿ ಆಡಳಿತ ಪಕ್ಷದ ಸಿದ್ದಾಂತ, ಹೋರಾಟಕ್ಕೆ ವಿರುದ್ಧವಾಗಿ ತರಾತುರಿಯಲ್ಲಿ ಬಿಎಸ್‌ವೈ ಸರ್ಕಾರ ಅನುಸರಿಸಿದ ನಡೆಯು ಬಿಜೆಪಿ ಶಾಸಕರ ಪಾಳಯದಲ್ಲೇ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿ ಶಾಸಕರು, ಸಚಿವರನೇಕರು ಪಕ್ಷದ ಹೈಕಮಾಂಡ್‌ಗೆ ದೂರು ನೀಡಿ ಬಿಎಸ್‌ವೈ ನಿರ್ಧಾರದ ವಿರುದ್ದ ಆಕ್ರೋಶ ಹೊರ ಹಾಕಿದರೆ, ಆರೆಸ್ಸೆಸ್ ವಕೀಲ ಎಂದೇ ಗುರುತಾಗಿರುವ ಎಸ್.ದೊರೆರಾಜು ಮೂಲಕ ಸಾರ್ವಜನಿಕ ಹಿತಾಸಕ್ತಿ ದೂರು ಹೈಕೋರ್ಟ್ ಅಂಗಳ ಸೇರಿದೆ. ಈ ಅರ್ಜಿ ಮೇಲೆ ನಡೆದ ವಿಚಾರಣೆ ಸಂದರ್ಭದಲ್ಲಿ, ಈ ಪ್ರಕರಣ ಬಗ್ಗೆ ಸರ್ಕಾರ ಹೊಂದಿರುವ ಕಾಳಜಿ, ಕಾರ್ಯವೈಖರಿ ಬಗ್ಗೆ ನ್ಯಾಯಾಲಯವೇ ಬೇಸರ ಹೊರಹಾಕಿದೆ.
ದೊರೆರಾಜು ಮೂಲಕ ಸಾಮಾಜಿಕ ಹೋರಾಟಗಾರ ಕೆ. ಪಾಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಓಕಾ ಅವರನ್ನೊಳಗೊಂಡ ಪೀಠದ ಮುಂದೆ ವಿಚಾರಣೆಗೆ ಬಂದಿದೆ. ಸರ್ಕಾರದ ಪರವಾಗಿ ವಕೀಲ ವಿಜಯಕುಮಾರ್ ಹಾಜರಾದರೆ, ಜಿಂದಾಲ್ ಕಂಪನಿ ಪರವಾಗಿ ದೆಹಲಿಯಿಂದ ಬಂದಿದ್ದ ಸಿಂಘ್ವಿ ಅವರು ವಕಾಲತ್ತು ವಹಿಸಿಕೊಂಡು ಹಾಜರಾಗಿದ್ದರು.
ಜಿಂದಾಲ್ ಕುರಿತು ಸಂಪುಟ ತೀರ್ಮಾನ ದಾಖಲೆಗಳನ್ನು ಸಲ್ಲಿಸುವಂತೆ ಹಿಂದಿನ ವಿಚಾರಣೆ ವೇಳೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಸರ್ಕಾರ ಸಲ್ಲಿಸಿದ ಅಸ್ಪಷ್ಟ ದಾಖಲೆಗಳ ಬಗ್ಗೆ ಅರ್ಜಿದಾರರ ಪರ ವಕೀಲರು ಆಕ್ಷೇಪ ಹೊರಹಾಕಿದರು. ನ್ಯಾಯಮೂರ್ತಿಗಳಿಗೂ ಸರ್ಕಾರದ ಮಾಹಿತಿಯಲ್ಲಿ ಅಸ್ಪಷ್ಟತೆ ಕಂಡುಬಂದಿದೆ. ಅರ್ಜಿದಾರರಿಗೆ ದಾಖಲೆಗಳ ಪ್ರತಿಗಳನ್ನು ಸಲ್ಲಿಸದ ಸರ್ಕಾರಿ ವಕೀಲರ ನಡೆ ಬಗ್ಗೆ ಅತೃಪ್ತಿ ಹೊರ ಹಾಕಿದ ನ್ಯಾಯಮೂರ್ತಿಗಳು ದಾಖಲೆಗಳ ಪ್ರತಿ ನೀಡುವಂತೆ ಸೂಚಿಸಿದರು.
ಪರಿಸರವಾದಿಗಳಿಂದಲೂ ಅರ್ಜಿ..!
ಈ ನಡುವೆ, ಶಿಕ್ಷಣ ತಜ್ಞ ಹಾಗೂ ಪರಿಸರವಾದಿ ಹೇಳಿಕೊಂಡು ಪ್ರೊ.ರಾಧಾಕೃಷ್ಣ ಎಂಬವರು ತಾವು ಈ ಪ್ರಕರಣದಲ್ಲಿ ಇಂಪ್ಲೀಡ್ ಆಗಲು ಅವಕಾಶ ಕೋರಿದ ಸನ್ನಿವೇಶವೂ ನಡೆದಿದೆ. ಇದಕ್ಕೆ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಈ ನಡುವೆ ಜಿಂದಾಲ್ ಕಂಪನಿಗೆ ಜಮೀನು ಪರಭಾರೆ ವಿಷಯದಲ್ಲಿ ಸಂಪುಟದಲ್ಲಿ ಕೈಗೊಂಡ ತೀರ್ಮಾನ ಕುರಿತ ಸರ್ಕಾರದ ವಕೀಲರ ಮಾಹಿತಿ ಗೊಂದಲಕ್ಕೆ ಎಡೆಮಾಡಿತು. ಒಮ್ಮೆ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದೂ, ಅನಂತರ ಸ್ಪಷ್ಟ ನಿರ್ಧಾರವಾಗಿಲ್ಲ ಎಂದೂ ನ್ಯಾಯಾಲಯದ ಗಮನಸೆಳೆದರು. ಈ ಅಸ್ಪಷ್ಟತೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಸರ್ಕಾರ ಏನೇ ತೀರ್ಮಾನ ಕೈಗೊಂಡರೂ ನ್ಯಾಯಾಲಯದ ತೀರ್ಪೇ ಅಂತಿಮವಾಗಿರುತ್ತದೆ ಎಂದು ಸ್ಪಷ್ಟವಾಗಿ ಹೇಳಿ, ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿದ್ದಾರೆ.
ಕಮಲ ಪಾಳಯದಲ್ಲಿ ತಳಮಳ:
‘ಸರ್ಕಾರ ಏನೇ ತೀರ್ಮಾನ ಕೈಗೊಂಡರೂ ನ್ಯಾಯಾಲಯದ ತೀರ್ಪೇ ಅಂತಿಮ’ ಎಂಬ ಸಂದೇಶ ಹೈಕೋರ್ಟ್‌ನಿಂದ ಬಂದಿರುವಂತೆಯೇ ಬಿಎಸ್‌ವೈ ಪಾಳಯದಲ್ಲಿ ತಳಮಳ ಸೃಷ್ಟಿಯಾಗಿದೆ. ಬಿಜೆಪಿಯ ಹೈಕಮಾಂಡ್ ನಾಯಕರು, ನಾಯಕತ್ವ ಬದಲಾವಣೆಯನ್ನು ಅಪೇಕ್ಷಿಸುತ್ತಿರುವ ಶಾಸಕರು ಹಾಗೂ ಬಿಜೆಪಿಯ ಮಾತೃ ಸಂಘಟನೆ ಆರೆಸ್ಸೆಸ್ ಪ್ರಮುಖರು ಹೈಕೋರ್ಟ್ ವಿದ್ಯಮಾನವನ್ನು ಗಮನಿಸುತ್ತಲೇ ಇರುವಾಗ ಇಂಥದ್ದೊಂದು ಸಂದೇಶ ಬಿಎಸ್‌ವೈ ಬಳಗಕ್ಕೆ ತಲುಪಿದ್ದು, ಇದೀಗ ಈ ಗುಂಪಿನ ನಾಯಕರಿಗೆ ಮುಂದೇನು ಎಂಬ ಆತಂಕ ಸೃಷ್ಟಿಯಾಗಿದೆ.