ಗದಗ್: ಸಹಿ-ಲೆಟರ್ ಬಾಂಬ್ ಮೂಲಕ ರಾಜ್ಯ ರಾಜಕಾರಣಗಳಲ್ಲಿ ಸಂಚಲನ ಮೂಡಿಸಿರುವ ಬಿಎಸ್‌ವೈ ಆಪ್ತ ಶಾಸಕ ರೇಣುಕಾಚಾರ್ಯ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಚಿವ ಯೋಗೇಶ್ವರ್ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ಶಾಸಕ ರೇಣುಕಾಚಾರ್ಯ ಯಡಿಯೂರಪ್ಪ ಅವರ ನಾಯಕತ್ವ ಬೆಂಬಲಿಸಿ ಹಾಗೂ ಸಿಎಂ ಬದಲಾವಣೆಗೆ ಪ್ರಯತ್ನಿಸುತ್ತಿರುವವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ 65 ಮಂದಿಯಿಂದ ಸಹಿ ಸಂಗ್ರಹಿಸಿರುವುದಾಗಿಯೂ, ಹೈಕಮಾಂಡ್ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೂ ಅದನ್ನು ನೀಡಿರುವುದಾಗಿಯೂ ಹೇಳಿದ್ದರು.
ಈ ಬೆಳವಣಿಗೆ ಬಗ್ಗೆ ಗದಗ್‌ನಲ್ಲಿ ಸ್ಪಷ್ಟನೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ತಮಗೆ ಸಹಿ ಸಂಗ್ರಹ ವಿಚಾರ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ರೇಣುಕಾಚಾರ್ಯ ನಡೆ ಬಗ್ಗೆ ಪರೋಕ್ಷ ಅಸಮಾಧಾನ ಹೊರಹಾಕಿರುವ ನಳಿನ್ ಕುಮಾರ್ ಕಟೀಲ್, ಭಾರತೀಯ ಜನತಾ ಪಾರ್ಟಿಯಲ್ಲಿ ಸಹಿ ಸಂಗ್ರಹ, ಒತ್ತಾಯ, ಒತ್ತಡ ಇರಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದೆ ಎಂದು ಪುನರುಚ್ಛರಿಸಿದ ಅವರು, ಸಹಿ ಸಂಗ್ರಹದ ಬಗ್ಗೆ ಮಾಧ್ಯಮದಲ್ಲಿ ಸುದ್ದಿಯಾಗಿದೆ. ಇದು ಸರಿಯಾದ ಕ್ರಮ ಅಲ್ಲ, ವಿಚಾರಿಸಿ ತಿಳಿದುಕೊಳ್ಳುತ್ತೇನೆ ಎಂದರು. ಪರ-ವಿರೋಧ ಸಹಿ ಸಂಗ್ರಹದ ಕಾರ್ಯಕ್ರಮ, ಪದ್ಧತಿ ಬಿಜೆಪಿಯಲ್ಲಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಅವರು ರೇಣುಕಾಚಾರ್ಯ ಹೇಳಿಕೆಗೆ ಟಾಂಗ್ ನೀಡಿದರು.
ಬಿಎಸ್‌ವೈ ರಾಜೀನಾಮೆ ಅಗತ್ಯವಿಲ್ಲ
ಹೈಕಮಾಂಡ್ ಸೂಚಿಸಿದರೆ ರಾಜಿನಾಮೆ ನೀಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ನಳಿನ್, ಸಿಎಂ ಅವರು ಆದರ್ಶವನ್ನು ತೋರಿದ್ದಾರೆ, ನಮ್ಮ ಪಾರ್ಟಿಯ ವಿಶೇಷತೆಯೇ ಅದು. ಯಾರೂ ಕೂಡಾ ಅಧಿಕಾರಕ್ಕೆ ಅಂಟಿಕೊಂಡು ಕೂರುವುದಲ್ಲ. ಹಿರಿಯರು ಸೂಚಿಸಿದನ್ನು ಪಾಲನೆ ಮಾಡುವುದು ನಿಷ್ಠಾವಂತ ಕಾರ್ಯಕರ್ತರ ಲಕ್ಷಣವಾಗಿದೆ. ಅದನ್ನು ಕಾರ್ಯಕರ್ತರಿಗೆ ಯಡಿಯೂರಪ್ಪ ತೋರಿಸಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಯಡಿಯೂರಪ್ಪ ಅವರು ರಾಜೀನಾಮೆ ಕೊಡುವ ಅಗತ್ಯತೆ, ಯೋಚನೆ, ಚಿಂತನೆಯಂತಹಾ ವಿಷಯಗಳಿಲ್ಲ. ನಾಯಕ ಬದಲಾವಣೆ ಬಿಜೆಪಿಯಲ್ಲಿ ಇವತ್ತು ಅಪ್ರಸ್ತುತವಾಗಿದೆ ಎಂದು ಕಟೀಲ್ ಹೇಳಿದರು.