ಉಡುಪಿ: ಗೋಳಿಹೊಳೆ ಗ್ರಾಮದ 5 ವರ್ಷದ ಮಗು ಸುಶಾಂತ್ ಹಲವು ವರ್ಷಗಳಿಂದ ಮಾರಣಾಂತಿಕ ರಕ್ತಸಂಬಂಧಿ ಕಾಯಿಲೆಯಾದ ತಲೆಸ್ಸೇಮಿಯಾದಿಂದ ಬಳಲುತ್ತಿದ್ದಾನೆ. ಬಡಪಾಯಿ ಹೆತ್ತವರು ಈತನ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಈ ಕಾಯಿಲೆಯಿಂದ ಗುಣವಾಗಬೇಕಾದರೆ ಚಿಕಿತ್ಸೆಗಾಗಿ ಸುಮಾರು 30 ಲಕ್ಷ ರೂಪಾಯಿ ಹಣದ ಅವಶ್ಯಕತೆ ಇದೆ. ಇಷ್ಟೊಂದು ಮೊತ್ತವನ್ನು ಪೇರಿಸಲಾಗದ ಸ್ಥಿತಿಯಲ್ಲಿರುವ ಮಗುವಿನ ಹೆತ್ತವರು ದಾನಿಗಳ ಸಹಾಯವನ್ನು ಎದುರು ನೋಡುತ್ತಿದ್ದಾರೆ.
ಈವಿಷಯ ತಿಳಿದಿದ್ದೇ ತಡ ಈ ಮಗುವಿನ ಹೆತ್ತವರ ಬಗ್ಗೆ ಮಾಹಿತಿ ಕಳೆಹಾಕಿದ ಸಾಮಾಜಿಕ ಕಾರ್ಯಕರ್ತ ಗೋವಿಂದ ಬಾಬು ಪೂಜಾರಿಯವರು ಚಿಕಿತ್ಸೆಗೆ ನೆರವು ನೀಡಲು ಮುಂದಾದರು.
ಅದಾಗಲೇ ಬೈಂದೂರು ಬಳಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಹಲವು ಹಳ್ಳಿಗಳಿಗೆ ಜೀವಜಲ ಪೂರೈಸುವ ಕಾರ್ಯದಲ್ಲಿ ತೊಡಗಿದ್ದ ಗೋವಿಂದ ಬಾಬು ಪೂಜಾರಿಯವರು, ತೌಕ್ತೆ ಚಂಡಮಾರುತದಿಂದಾಗಿ ಸಂತ್ರಸ್ತರಾಗಿರಿವ ಮಂದಿಗೆ ಮನೆ ಕಟ್ಟಿಕೊಡುವ ಕೆಲಸ ಮಾಡುತ್ತಿದ್ದರು. ಅದಾಗಲೇ ಅವರಿಗೆ ಈ ಮಗುವಿನ ಕಾಯಿಲೆ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಮಗುವಿನ ಮನೆಗೆ ಧಾವಿಸಿ ಚಿಕಿತ್ಸೆಗಾಗಿ ಒಂದೂವರೆ ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ.
ದೇಶದ ಪ್ರತಿಷ್ಠಿತ ಆಹಾರೋದ್ಯಮ ಸಂಸ್ಥೆ ChefTalk ಕಂಪನಿಯ ಮುಖ್ಯಸ್ಥರೂ ಆಗಿರುವ ಗೋವಿಂದ ಬಾಬು ಪೂಜಾರಿಯವರು ಅಸಹಾಯಕರಿಗೆ ನೆರವಾಗಲೆಂದೇ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಈ ಟ್ರಸ್ಟ್ ಮೂಲಕ ಶೋಷಿತರಿಗಾಗಿ ಸಹಾಯಹಸ್ತ ಚಾಚುತ್ತಿರುವ ಗೋವಿಂದ ಬಾಬು ಪೂಜಾರಿಯವರು, ನಿರ್ಗತಿಕರಿಗಾಗಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಹಲವಾರು ಕುಟುಂಬಗಳಿಗೆ ವೈದ್ಯಕೀಯ ನೆರವು ನೀಡಿ ಆಪತ್ಬಾಂಧವರಾಗಿ ಗುರುತಾಗಿದ್ದಾರೆ. ನಿರುದ್ಯೋಗ ನಿವಾರಣೆಯ ಮಂತ್ರ ಪಠಿಸುತ್ತಿರುವ ಇವರು, ವಿವಿಧ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಆರೇಳು ಸಾವಿರ ಮಂದಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ಜೊತೆಗೆ ಸ್ವ ಉದ್ಯೋಗಿಗಳಾಗುವ ಹೊಂಗನಸು ಹೊತ್ತಿರುವವರಿಗೆ ಹಣಕಾಸಿನ ಸೌಲಭ್ಯ ಕಲ್ಪಿಸಲೆಂದು ಶ್ರೀ ನಾರಾಯಣಗಯರುಗಳ ಹೆಸರಲ್ಲಿ ಸೋಸೈಟಿಯನ್ನೂ ಆರಂಭಿಸಿದ್ದಾರೆ.