ಬೆಂಗಳೂರು: ರಾಜ್ಯದಲ್ಲೂ ಬ್ಲ್ಯಾಕ್ ಫಂಗಸ್ ಆತಂಕ ಹೆಚ್ಚಿದೆ. ವೈದ್ಯಲೋಕಕ್ಕೆ ಸವಾಲಾಗಿರುವ ಬ್ಲ್ಯಾಕ್ ಫಂಗಸ್ ಹಾವಳಿ ನಿಯಂತ್ರಣಕ್ಕೆ ಸರ್ಕಾರದ ಕಡೆಯಿಂದಲೂ ಪ್ರಯತ್ನ ಸಾಗಿದೆ.
ಈ ನಡುವೆ, ಈವರೆಗೆ ರಾಜ್ಯದಲ್ಲಿ 446 ಮಂದಿ ಬ್ಲ್ಯಾಕ್ ಫಂಗಸ್ ಸೋಂಕಿಗೆ ಒಳಗಾಗಿದ್ದಾರೆ. 433 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 11 ಮಂದಿ ಮನೆಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿದೆ. 12 ರೋಗಿಗಳು ಮೃತಪಟ್ಟಿದ್ದಾರೆ. ಈ ಸೋಂಕು ನಿವಾರಣೆಗೆ 1 ಸಾವಿರ ಔಷಧಿ ವೈಲ್ ಗಳು ಕೇಂದ್ರದಿಂದ ಸಿಗಲಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಕೋವಿಡ್ ಮರಣ ಪ್ರಮಾಣ ಕಡಿಮೆ ಮಾಡಲು ಪ್ರತಿ ಜಿಲ್ಲೆಯಲ್ಲಿ ಟೆಲಿ ಐಸಿಯುನಲ್ಲಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಚರ್ಚಿಸಲಾಗಿದೆ ಎಂದೂ ಅವರು ಮಾಹಿತಿ ಹಂಚಿಕೊಂಡರು.
ಇದೇ ವೇಳೆ, ರಾಜ್ಯದಲ್ಲಿ 555 ಬೇಸಿಕ್ ಆಂಬ್ಯುಲೆನ್ಸ್, 157 ಅಡ್ವಾನ್ಸ್ಡ್ ಆಂಬ್ಯುಲೆನ್ಸ್ ಇದೆ. 530 ವೆಂಟಿಲೇಟರ್ ಕೇಂದ್ರದಿಂದ ಬಂದಿದ್ದು, ಇದನ್ನು ಆಂಬ್ಯುಲೆನ್ಸ್ ಗೆ ಅಳವಡಿಸಲಾಗುವುದು. ಇದರಿಂದ ಎಲ್ಲಾ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ 1.05 ಕೋಟಿ ಡೋಸ್ ಕೋವಿಶೀಲ್ಡ್ ಬಂದಿದ್ದು, 13.54 ಲಕ್ಷ ನೇರ ಖರೀದಿ ಮಾಡಲಾಗಿದೆ. 13.10 ಲಕ್ಷ ಡೋಸ್ ಕೋವ್ಯಾಕ್ಸಿನ್ ನೇರ ಖರೀದಿ ಮಾಡಲಾಗಿದೆ. ಈವರೆಗೆ 1.22 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಸದ್ಯ 11.46 ಲಕ್ಷ ಡೋಸ್ ದಾಸ್ತಾನು ಇದೆ. ಪ್ರಾಶಸ್ತ್ಯದಲ್ಲಿ ಗುಂಪುಗಳನ್ನು ಮಾಡಿಕೊಂಡು ಲಸಿಕೆ ನೀಡಲಾಗುತ್ತಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.