ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಸೋಂಕು ಉಲ್ಬಣಗೊಂಡಿದ್ದು, ಸಾಂಕ್ರಾಮಿಕ ರೋಗವು ಪ್ರಸ್ತುತ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ಸೋಂಕು ಹರಡವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಲಾಕ್‌ಡೌನ್ ಮಾದರಿಯ ಟಫ್ ರೂಲ್ಸ್ ಜಾರಿಗೆ ತಂದಿದೆ. ಆದರೂ ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಸಂಚಾರ, ಜನಸಂದಣಿಗೆ ಬ್ರೇಕ್ ಬಿದ್ದಿಲ್ಲ.
ಈ ನಡುವೆ ಬೆಂಗಳೂರಿನ ಆರ್.ಟಿ.ನಗರ, ಹೆಬ್ಬಾಳ, ಸಂಜಯನಗರ ಮತ್ತು ಸುತ್ತಮುತ್ತಲ ಬಡಾವಣೆಗಳಲ್ಲಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಪ್ರಸ್ತುತ 144 ಸೆಕ್ಸನ್ ಜಾರಿಯಲ್ಲಿದ್ದರೂ ರಾತ್ರಿ ವೇಳೆ ಅಂಗಡಿ ಮಳಿಗೆಗಳ ಬಳಿ ಜಮಾಯಿಸುವ ಪೋಕರಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಜೆ.ಸಿ.ನಗರ ಉಪ ವಿಭಾಗದ ಎಸಿಪಿ ರೀನಾ ಸುವರ್ಣ ಅವರೇ ಸ್ವತಃ ಕಾರ್ಯಾಚರಣೆಗೆ ಇಳಿದಿದ್ದು ಹೆಬ್ಬಾಳ ಬಳಿ ನಿಯಮ ಮೀರಿ ಜಮಾಯಿಸಿದ್ದ ಜನರನ್ನು ಕಂಡು ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಗೂ ಜಗ್ಗದ ಯುವಕರನ್ನು ಮನೆಗೆ ಕಳುಹಿಸಲು ಲಾಠಿಗೆ ಕೆಲಸ ಕೊಟ್ಟಿದ್ದಾರೆ.
ಅಲ್ಲಲ್ಲಿ ತಡರಾತ್ರಿಯಾದರೂ ಗುಂಪು ಗುಂಪಾಗಿ ಜಮಾಯಿಸಿದವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಪ್ರಯಾಸದ ಕೆಲಸವಾಗಿದೆ. ಕಳೆದ ರಾತ್ರಿ ಜೆ.ಸಿ.ನಗರ ಉಪವಿಭಾಗದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಈ ರೀತಿ ಕಾರ್ಯಾಚರಣೆ ನಡೆದಿದೆ.
ಅಸಹಾಯಕರ ಪಾಲಿಗೆ ಆಪತ್ಬಾಂಧವರು..
ಈ ನಡುವೆ, ಎಸಿಪಿ ರೀನಾ ಸುವರ್ಣ ಟೀಂ ಕೈಗೊಂಡ ಮಾನವೀಯ ಕೆಲಸ ಕೂಡಾ ನಾಡಿನ ಗಮನ ಸೆಳೆದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಪ್ರಸ್ತುತ ಲಾಕ್‌ಡೌನ್ ರೀತಿಯ ಕಠಿಣ ನಿಯಮವು ನಿರಾಶ್ರಿತರ ಪಾಲಿಗೆ ಮರಣ ಶಾಸನವೆನಿಸಿದೆ. ಈ ರೀತಿ ಅತಂತ್ರ ಸ್ಥಿತಿಯಲ್ಲಿರುವ ಮಂದಿಗೆ ರೀನಾ ಮತ್ತು ಅವರ ಸಹೋದ್ಯೋಗಿಗಳು ರಾತ್ರಿ ವೇಳೆ ಉಚಿತವಾಗಿ ಆಹಾರ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಬೀದಿ ಬದಿ, ಫೂಟ್‌ಪಾತ್‌ಗಳನ್ನೇ ಆಶ್ರಯಿಸಿರುವ ಇಂತಹಾ ಅಸಹಾಯಕ ಮಂದಿಗೆ ಇತ್ತೀಚಿನ ರಾತ್ರಿಗಳು ಆಹಾರವಿಲ್ಲದ ಕ್ಷಣಗಳಾಗಿವೆ. ಅದರಲ್ಲೂ ಬದುಕಿನ ಸಂಧ್ಯಾಕಾಲದಲ್ಲಿರುವವರಿಗೆ ಆಹಾರ ಸಿಗದಿದ್ದರೆ ಆನಾರೋಗ್ಯದ ಸುಳಿಯಿಂದ ಹೊರಬರಲಾಗದು. ಈ ಸಂದಿಗ್ಧ ಸ್ಥಿತಿಯಲ್ಲಿದ್ದವರಿಗೆ ಆಹಾರ ನೀಡಿ ಈ ಪೊಲೀಸರು ಗಮನಸೆಳೆದಿದ್ದಾರೆ. ಅನ್ನ, ಬಿಸ್ಕತ್ತು, ತಿನಿಸು, ಜೀವಜಲ ಸಹಿತ ಅಗತ್ಯ ಆಹಾರ ಹಂಚುತ್ತಿರುವ ಈ ಖಾಕಿ ಸಮೂಹದ ಕಾರ್ಯ ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.
ಪೊಲೀಸರು ತಮ್ಮ ಖಡಕ್ ವರ್ತನೆಯ ನಡುವೆ, ಎಷ್ಟು ದಿನ ಈ ರೀತಿಯ ಔದಾರ್ಯ ತೋರಿಸಲು ಸಾಧ್ಯ? ಹೀಗಿರುವಾಗ ಈ ಕಾರ್ಯದಲ್ಲಿ ಸ್ವಯಂಸೇವಕರೂ ಕೈಜೋಡಿಸಬೇಕಿದೆ.