ಮಂಗಳೂರು: ಇತ್ತೀಚೆಗೆ ಶಿವಮೊಗ್ಗ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗಣಿ ಸ್ಫೋಟದಲ್ಲಿ ಹಲವರು ಬಲಿಯಾದ ಕಹಿ ದುರಂತ ಇನ್ನೂ ನೆನಪಿನಂಗಳದಲ್ಲಿ ಉಳಿದಿವೆ. ಆದರೆ ಇಂತಹಾ ಅವಘಡಗಳಿಗೆ ಕಡಿವಾಣ ಹಾಕಲು ಸಚಿವ ನಿರಾಣಿ ಟೀಂ ಪ್ರಯತ್ನಿಸುತ್ತಿದೆಯಾದರೂ ಅಧಿಕಾರಿಗಳು ಮಾತ್ರ ಸರ್ಕಾರದ ಜೊತೆ ಕಣ್ಣಮುಚ್ಚಾಳೆ ಆಡುತ್ತಿದ್ದಂತಿದೆ. ಇದಕ್ಕೆ ಉದಾಹರಣೆ ಎಂಬಂತಿದೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಗಣಿ ಪುರಾಣ.
ಬೆಳ್ತಂಗಡಿ ಸಮೀಪದ ಸಣವಾಲು ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಅಕ್ರಮವಾಗಿ ಸ್ಫೋಟಕ ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕೆಲವು ತಿಂಗಳ ಹಿಂದೆ ಕೃಷಿ ಕಾಯಕಕ್ಕೆ ಅಡ್ಡಿಯಾಗುವ ಕಪ್ಫು ಬಂಡೆಯನ್ನು ತೆರವುಗೊಳಿಸುವ ನೆಪದಲ್ಲಿ ಪಡೆಯಲಾದ ಲೈಸನ್ಸ್ ಇದೀಗ ಸ್ಫೋಟಕ ಬಳಕೆಯೊಂದಿಗೆ ಅಕ್ರಮ ಗಣಿಗಾರಿಕೆಯ ಸ್ವರೂಪ ಪಡೆದಿದೆ ಎಂಬುದು ಸ್ಥಳೀಯರ ಆರೋಪ. ಈ ಸಂಬಂಧ ತಹಶಿಲ್ದಾರ್, ಗಣಿ ಇಲಾಖೆ ಅಧಿಕಾರಿಗಳ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸಣವಾಲು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಈ ನಡುವೆ, ಈ ಗಣಿಗಾರಿಕೆಗೆ ಸ್ಫೋಟಕ ಬಳಕೆ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರಿಗೆ ರೌಡಿಗಳ ಮೂಲಕ ಜೀವ ಬೆದರಿಕೆಯೊಡ್ಡುವ ಘಟನೆಯೂ ನಡೆದಿದೆ. ಈ ಸಂಬಂಧದ ದೂರೊಂದು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರುವ ಮೂಲಕ ಕರಾವಳಿಯಲ್ಲಿ ಮಾರ್ಧನಿಸುತ್ತಿರುವ ಅಕ್ರಮ ಗಣಿ ಸ್ಫೋಟದ ಸದ್ದಿನ ಸುದ್ದಿಗೆ ರೋಚಕತೆಯ ತಿರುವು ಸಿಕ್ಕಿದೆ.
ತಹಶೀಲ್ದಾರ್ ಜಾಣ ಮೌನ..?
ಅಕ್ರಮ ಗಣಿ ಸ್ಫೋಟದ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಬೆಳ್ತಂಗಡಿ ತಹಶೀಲ್ದಾರ್ ಕೂಡಾ ಎಚ್ಚೆತ್ತುಕೊಂಡಿದ್ದಾರೆ. ಈ ವಿವಾದಿತ ಗಣಿಗಾರಿಕೆ ಬಗ್ಗೆ ಅವರು ತರಾತುರಿಯಲ್ಲೇ ಪರಿಶೀಲನೆ ನಡೆಸಿದರು. ಈ ಬಗ್ಗೆ ಉದಯ ನ್ಯೂಸ್ ಜೊತೆ ಮಾಹಿತಿ ಹಂಚಿಕೊಂಡ ತಹಶೀಲ್ದಾರರು ಸದರಿ ಗಣಿಗಾರಿಕೆ ಸಂಬಂಧ ಜಿಲ್ಲಾಧಿಕಾರಿಯೇ ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಈ ಗಣಿಗಾರಿಕೆಗೆ ಸ್ಫೋಟಕ ಬಳಸಲು ಅನುಮತಿ ಇಲ್ಲ. ಈ ಬಗ್ಗೆ ತಮ್ಮ ನಿಲುವೇನು ಎಂದು ಕೇಳಿದಾಗ, ಅಲ್ಲಿ ಸ್ಫೋಟಕ ಬಳಸುತ್ತಿಲ್ಲ ಎಂಬ ಅಧಿಕಾರಿಯ ಉತ್ತರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಈ ಗಣಿಗಾರಿಕೆ ಸ್ಥಳದಲ್ಲಿ ಅಕ್ರಮವಾಗಿ ಸ್ಫೋಟಕ ಬಳಸಿ ಬಂಡೆಯನ್ನು ಸಿಡಿಸಲಾಗುತ್ತಿದೆ ಎಂಬ ಬಗ್ಗೆ ಈಗಾಗಲೇ ದೂರು ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗಲೂ ಅದರ ಕುರುಹು ಸಿಗುತ್ತದೆ ಎಂದು ತಹಶೀಲ್ದಾರರ ಗನನಸೆಳೆದಾಗ ‘ಈ ಬಗ್ಗೆ ಪರಿಶೀಲಿಸುತ್ತೇವೆ’ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ..
ಬೆಳ್ತಂಗಡಿಯ ಸಣವಾಲು ಗ್ರಾಮದಲ್ಲಿನ ಈ ಗಣಿ ಸ್ಫೋಟದ ವಿವಾದ ಇಂದು ನಿನ್ನೆಯದಲ್ಲ. ಸ್ಫೋಟದಿಂದಾಗಿ ಗ್ರಾಮದ ಮನೆಗಳಿಗೆ ಹಾನಿಯಾಗಿವೆ. ಈ ಬಗ್ಗೆ ಪಿಡಿಒ, ಗ್ರಾಮಲೆಕ್ಕಾಧಿಕಾರಿ, ತಹಶೀಲ್ದಾರ್, ಗಣಿ ಇಲಾಖೆ, ಲೋಕಾಯುಕ್ತ ಪೊಲೀಸ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ದೂರು ಸಲ್ಲಿಸಿ ಅನೇಕ ತಿಂಗಳುಗಳಾದರೂ ಕ್ರಮ ಕೈಗೊಂಡಿಲ್ಲ. ಸ್ಫೋಟ ಬಗ್ಗೆ ಭೂಗರ್ಭ ತಜ್ಞರ ಪರಿಶೀಲನಾ ವರದಿಯನ್ನೂ ಸಿದ್ಧಪಡಿಸಿಲ್ಲ. ಬದಲಾಗಿ ಸ್ಫೋಟದ ಬಗ್ಗೆ ಅಧಿಕಾರಿಗಳು ನಮ್ಮಿಂದಲೇ ಸಾಕ್ಷಿ ಕೇಳುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ನಡುವೆ, ಬೆಳ್ತಂಗಡಿಯ ಈ ಅಕ್ರಮ ಗಣಿಗಾರಿಕೆ ವಿರುದ್ದದ ಗ್ರಾಮಸ್ಥರ ಹೋರಾಟವನ್ನು ಹತ್ತಿಕ್ಕಲು ಭೂಗತ ಪಾತಕಿಗಳು ಅಖಾಡಕ್ಕಿಳಿದಿದ್ದಾರೆಯೇ ಎಂಬ ಅನುಮಾನ ಪೊಲೀಸರನ್ಬೂ ಕಾಡಿದೆ. ಮಂಗಳೂರು ಹೊರವಲಯದ ಕಟೀಲು ಬಳಿ ಇದ್ದ ಸಣವಾಲು ಗ್ರಾಮದ ವ್ಯಕ್ತಿಯೊಬ್ಬರಿಗೆ ಅನಾಮಿಕ ವ್ಯಕ್ತಿಯೊಬ್ಬ ಜೀವ ಬೆದರಿಕೆಯೊಡ್ಡಿದ್ದು ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಪಾತಕಿಗಳ ಪತ್ತೆಗೆ ಕಬಲೆ ಬೀಸಿದ್ದಾರೆ.