ಬೆಂಗಳೂರು: ದೊಡ್ಡಬಳ್ಳಾಪುರ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಪೊಲೀಸರು, ಕೋವಿಡ್-19 ನಿಯಮ ಉಲ್ಲಂಘನೆ ಮಾಡುತ್ತಿದ್ದವರಿಗೆ ದಂಡ ವಿಧಿಸಿ ಮಾಸ್ಕ್ ವಿತರಿಸಿದ ಪ್ರಸಂಗ ಇಂದು ನಡೆದಿದೆ.
ಸಬ್ ಇನ್ಸ್ಪೆಕ್ಟರ್ ಕೆ.ವೆಂಕಟೇಶ್ ನೇತೃತ್ವದಲ್ಲಿ ಪೊಲೀಸರು ಎಪಿಎಂಸಿ ಮಾರುಕಟ್ಟೆ, ಬಸ್ ನಿಲ್ದಾಣ, ಬಸವಭವನ ಮತ್ತಿತರ ಕಡೆ ಸಂಚರಿಸಿ ನಿಯಮ ಪಾಲಿಸದವರಿಗೆ ದಂಡ ವಿಧಿಸಿದರು. ಉಚಿತ ಮಾಸ್ಕ್ ನೀಡಿ ಜಾಗೃತಿಯನ್ನೂ ಮೂಡಿಸಿದರು. ನಗರದ ಎಪಿಎಂಸಿ ಮಾರುಕಟ್ಟೆಗೆ ಪೊಲೀಸ್ ಜೀಪ್ ಬರುತ್ತಿದ್ದಂತೆ, ಮಾಸ್ಕ್ ಧರಿಸದೆ ಓಡಾಡುತ್ತಿದ್ದವರೂ ಎದ್ನೋ, ಬಿದ್ನೋ ಎಂದು ಓಟಕಿತ್ತ ಘಟನೆ ಸಹ ನಡೆಯಿತು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ರಾತ್ರಿ ಕರ್ಫ್ಯೂ ಉತ್ತಮ ಆರಂಭ ಕಂಡಿದೆ. ಈ ಕುರಿತು ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಮಾಹಿತಿ ನೀಡಿ, ಕೋವಿಡ್-19 ನಿಯಂತ್ರಣಕ್ಕೆ ಘೋಷಿಸಲಾಗಿರುವ ರಾತ್ರಿ ಕರ್ಫ್ಯೂಗೆ ಜನತೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಓಡಾಟಕ್ಕೆ ಬಿಟ್ಟರೆ ಅನಗತ್ಯವಾಗಿ ರಸ್ತೆಗಿಳಿಯುವವರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ.
ವಾರಾಂತ್ಯದ ಕರ್ಫ್ಯೂವಿನಲ್ಲಿ ಶುಕ್ರವಾರ ರಾತ್ರಿಯಿಂದ ಸೋಮವಾರದ ಬೆಳಗ್ಗೆವರೆಗೆ ಸಂಪೂರ್ಣ ಲಾಕ್‌ಡೌನ್ ಇರುವುದರಿಂದ, ಸಾರ್ವಜನಿಕರು ಇದೇ ರೀತಿ ಕರೊನಾ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ