ಬೆಂಗಳೂರು: ಕಾಂಗ್ರೆಸ್‍ನ ಬಿ ಟೀಮ್‍ನಂತೆ ಕೆಲಸ ಮಾಡುತ್ತಿರುವ ವಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ತಾಕತ್ತಿದ್ದರೆ, ಮೊದಲು ಶಾಸಕ ಸ್ಥಾನಕ್ಕೆ ನೀಡಿ, ಪಕ್ಷೇತರ ಶಾಸಕನಾಗಿ ಗೆದ್ದು ಬರಲಿ ಎಂದು ಸಚಿವ ಮುರುಗೇಶ್.ಆರ್ ನಿರಾಣಿ ಬಹಿರಂಗ ಸವಾಲು ಹಾಕಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸಚಿವ ಸಿ.ಸಿ ಪಾಟೀಲ್ ಹಾಗೂ ಪಂಚಮಸಾಲಿ ಶಾಸಕರ ಜೊತೆ ಜಂಟಿ ಪತ್ರಿಕಾಗೋಷ್ಟಿ ನಡೆಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನಾವು ರಾಜೀನಾಮೆ ಕೊಡಬೇಕು ಎಂದು ಹೇಳುವ ಮೊದಲು ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ವತಂತ್ರವಾಗಿ ಗೆದ್ದು ನಾಯಕತ್ವ ಸಾಬೀತುಪಡಿಸಿ ಎಂದು ಸಾವಲೆಸೆದರು.
ಯತ್ನಾಳ್ ಕಳೆದ ಚುನಾವಣೆಯಲ್ಲಿ ಗೆದ್ದು ಬಂದಿದ್ದೇ ಯಡಿಯೂರಪ್ಪನವರ ಆಶೀರ್ವಾದಿಂದ. ವಿಧಾನಪರಿಷತ್ ಚುನಾವಣೆ ವೇಳೆ ನೀವು ಅವಳಿ ಜಿಲ್ಲೆಯಲ್ಲಿ ಯಾರ್ಯಾರ ಕೈ ಕಾಲು ಹಿಡಿದು ಗೆದ್ದು ಬಂದೀರಿ ಎಂಬುದನ್ನು ನಾನು ಬಹಿರಂಗ ಪಡಿಸಬೇಕಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
ಕಳೆದ 25 ವರ್ಷಗಳಿಂದ ಯತ್ನಾಳ್ ಟೀಕೆ ಮಾಡುತ್ತಲೇ ಬಂದಿದ್ದಾರೆ. ಸಚಿವರಾದ ಜಗದೀಶ್ ಶೆಟ್ಟರ್ ,ಸೋಮಣ್ಣ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ನನ್ನ ಮೇಲೂ ವಾಗ್ದಾಳಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಯತ್ನಾಳ್ ಅವರು ಕಾಂಗ್ರೆಸ್‍ನ ಬಿ ಟೀಂ ಆಗಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಹೇಳಿದ್ದಾರೆ. ನಮ್ಮ ಕ್ಷೇತ್ರದ ಜನರಿಂದ ನಾವು ಶಾಸಕರಾಗಿದ್ದೇವೆ. ನಮಗೆ ಸಚಿವ ಸ್ಥಾನ ಕೊಟ್ಟಿದ್ದು ನಮ್ಮ ಹೈಕಮಾಂಡ್. ನಮ್ಮ ರಾಜೀನಾಮೆ ಅವರು ಕೇಳಬೇಕು ಹೊರತು ಯತ್ನಾಳ್ ಕೇಳುವುದಕ್ಕೆ ಯಾವ ಅರ್ಹತೆಯೂ ಇಲ್ಲ ಎಂದು ತಿರುಗೇಟು ನೀಡಿದರು.