ಕರಾವಳಿಯ ಮಠಗಳು ತುಳು ಪರಂಪರೆಯ ಪ್ರತಿಬಿಂಬ.. ಹಾಗಾಗಿಯೇ ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಸಮಾರಂಭ ತುಳುನಾಡಿನಲ್ಲೊಂದು ಮಹಾವೈಭವಕ್ಕೆ ಸಾಕ್ಷಿಯಾಗಲು ತಯಾರಿ ಸಾಗಿದೆ. ಇದರ ಸಡಗರ ತುಂಬುವ ಸಾರಸ್ವತ ಕೈಂಕರ್ಯಕ್ಕೆ ‘ಪೂವರಿ‘ ಬಳಗ ಮುನ್ನುಡಿ ಬರೆದಿದೆ
ಮಂಗಳೂರು: ತುಳುನಾಡಿನಲ್ಲಿ ಮತ್ತೊಂದು ಅಪೂರ್ವ ಸನ್ನಿವೇಶಕ್ಕೆ ವೇದಿಕೆ ಸಜ್ಜಾಗುತ್ತಿದೆ. ಕರಾವಳಿಯ ಪ್ರಮುಖ ಮಠಗಳಲ್ಲೊಂದಾದ ಒಡಿಯೂರಿನ ಶ್ರೀಗಳ ಷಷ್ಟ್ಯಬ್ದ ಸಂಭ್ರಮದ ಅಂಗವಾಗಿ ಪುತ್ತೂರಿನ ಪೂವರಿ ಪತ್ರಿಕಾ ಬಳಗ ಒಂದು ವಿಶಿಷ್ಟ ಸಾರಸ್ವತ ಸಮಾರಂಭವನ್ನು ಆಯೋಜಿಸಿದೆ. ಈ ಸಮಾರಂಭದ ಸಿದ್ದತೆಗೆ ಮುನ್ನುಡಿ ಬರೆಯಲಾಗಿದೆ.
ಪುತ್ತೂರು ಪೂವರಿ ಪತ್ರಿಕಾ ಬಳಗದ ಆಶ್ರಯದಲ್ಲಿ ಏಪ್ರಿಲ್ 2ರಂದು ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ ಆಯೋಜಿಸಲು ಶ್ರೀಗಳ ಷಷ್ಟ್ಯಬ್ದ ಸಂಭ್ರಮ ಸಮಿತಿ ಕಚೇರಿಯಲ್ಲಿ ನಡೆದ ಪೂರ್ವ ಭಾವೀ ಸಭೆ ನಿರ್ಧರಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ‘ಪೂವರಿ’ ತುಳು ಪತ್ರಿಕೆಯ ಸಂಪಾದಕರೂ ಆದ ಸಾಹಿತಿ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ಈ ಕಾರ್ಯಕ್ರಮವು ತುಳುನಾಡಿನ ಜನಪದ, ನಾಡು-ನುಡಿ, ಸಂಸ್ಕೃತಿ ಸಹಿತ ವಿವಿಧ ಕ್ಷೇತ್ರಗಳ ಪ್ರಮುಖರ ಸಮಾಗಮಕ್ಕೆ ಸಾಕ್ಷಿಯಾಗಲಿದೆ ಎಂದರು. ಇದು ಚಿಂತಕರ ಚಾವಡಿಯಾಗಿ ತುಳುನಾಡಿನ ವೈಭವ ಮೇಳೈಸುವ ವಿವಿಧ ಪ್ರಕ್ರಿಯೆಗಳಿಗೆ ಮುನ್ನುಡಿ ಬರೆಯಲು ಅನುಕೂಲವಾಗಲಿದೆ ಎಂಬುದೂ ಅವರ ಅಭಿಪ್ರಾಯ.
ಸಮಿತಿ ಸಂಯೋಜಕರೂ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ಕಾರ್ಯಕ್ರಮದ ರೂಪುರೇಷೆಗಳ ಕುರಿತು ಬೆಳಕುಚೆಲ್ಲಿದರು. ತುಳು ಭಜನೆ ಐಸಿರ, ತುಳು ಪತ್ರಿಕೆಗಳ ಪ್ರದರ್ಶನ, ವಿಶೇಷ ಸಂಚಿಕೆ ಬಿಡುಗಡೆ, ವಿಚಾರ ಗೋಷ್ಠಿ , ಪೂವರಿ ಸಾಹಿತ್ಯ ಪ್ರಶಸ್ತಿ ಪುರಸ್ಕಾರ, ದೇಶದ ವಿವಿಧ ಭಾಗಗಳಲ್ಲಿ ತುಳು ಪತ್ರಿಕೆಗೆ ಶ್ರಮಿಸಿದ ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದರು.
ಷಷ್ಟ್ಯಬ್ಧ ಮತ್ತು 60 ವಿವಿಧ ಕೈಂಕರ್ಯ
ಶ್ರೀಗಳ ಷಷ್ಟ್ಯಬ್ದ ಸಂಭ್ರಮ ಸಮಿತಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತಾಲೂಕು ಸಮಿತಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ತುಳುವಿಗೆ ಅಪಾರ ಕೊಡುಗೆ ನೀಡುತ್ತಿರುವ ಶ್ರೀಗಳ ಷಷ್ಟ್ಯಬ್ದ ಹಬ್ಬದ ಸವಿನೆಪಿನಲ್ಲಿ ಸಮಿತಿಯು ಸುಮಾರು 60 ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು ಈ ಪೈಕಿ ಪೂವರಿ ಪತ್ರಿಕಾ ಬಳಗ ತುಳು ಪತ್ರಿಕೆಗಳು ನಡೆದು ಬಂದ ಹಾದಿಯನ್ನು ಪರಿಚಯಿಸುವ ತುಳು ಪತ್ರಿಕಾ ಸಮ್ಮಿಲನ ಅರ್ಥ ಪೂರ್ಣವಾಗಿ ಮೂಡಿ ಬರಬೇಕಿದೆ. ಅದಕ್ಕೆ ತಕ್ಕಂತೆ ಪ್ರಯತ್ನ ನಡೆಯಬೇಕಿದೆ ಎಂದು ಸದಸ್ಯರಿಗೆ ಮಾರ್ಗದರ್ಶನ ಮಾಡಿದರು.
ತುಳು ಸಾಹಿತ್ಯ ಸಮ್ಮೇಳನ ಸಮಿತಿ ಸಂಚಾಲಕ ಕುಂಬ್ರ ದುರ್ಗಾ ಪ್ರಸಾದ ರೈ, ಸಮಿತಿ ಸಂಯೋಜಕ ರಾಜೇಶ್ ಬನ್ನೂರು ಕಾರ್ಯಾಧ್ಯಕ್ಷ ಸಹಜ್ ರೈ ಬಳಜ್ಜ, ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ, ಖಜಾಂಚಿ ಮಹೇಶ್ ಕಜೆ, ಕಾರ್ಯದರ್ಶಿ ರಂಜಿನಿ ಶೆಟ್ಟಿ, ಗೌರವ ಸಲಹೆಗಾರರಾದ ದೇವಪ್ಪ ನೋಂಡ, ಜಯಪ್ರಕಾಶ್ ರೈ ನೂಜಿಬೈಲು, ಒಡಿಯೂರು ಗ್ರಾಮ ವಿಕಾಶ ಯೋಜನೆಯ ಬಿ. ಯಶೋಧರ ಸಾಲ್ಯಾನ್, ಕಲಾವಿದರಾದ ಸತೀಶ ಬಲ್ಯಾಯ, ಕೃಷ್ಣಪ್ಪ ಶಿವನಗರ ಮುಂತಾದವರು ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಸಿದ್ದತೆ ಕುರಿತು ಚಿಂತನ ಮಂಥನ ನಡೆಸಿದರು.