ಬೆಂಗಳೂರು (ಗ್ರಾ) : ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹಾಗೂ ಸ್ಥಾಯಿ ಸಮಿತಿ ಚುನಾವಣಾಧಿಕಾರಿಗಳಾದ ಬಿ.ವಿನುತಾರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆ ಸಭೆಯಲ್ಲಿ ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಹಾಗೂ ಯೋಜನಾ ಸ್ಥಾಯಿ ಸಮಿತಿಗೆ ಕೃಷ್ಣಮೂರ್ತಿ ಮತ್ತು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗೆ ಪದ್ಮಾವತಿ ಮುನೇಗೌಡ ಅವರು ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೇವನಹಳ್ಳಿ ತಾಲ್ಲೂಕು, ಬೀರಸಂದ್ರ ಗ್ರಾಮ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೃಷ್ಣಮೂರ್ತಿ ಮತ್ತು ಪದ್ಮಾವತಿ ಮುನೇಗೌಡ ಅವರು ನಾಮಪತ್ರ ಸಲ್ಲಿಸಿದ್ದರು. ನಂತರ ನಾಮಪತ್ರ ಪರಿಶೀಲನೆ ಕಾರ್ಯ ಹಾಗೂ ನಾಮಪತ್ರ ಕ್ರಮಬದ್ಧವಾಗಿದ್ದರಿಂದ ಅಂಗೀಕಾರವಾಯಿತು.
ನಂತರ ನಡೆದ ಜಿಲ್ಲಾ ಪಂಚಾಯಿತಿ ಹಣಕಾಸು ಸ್ಥಾಯಿ ಸಮಿತಿ ಸದಸ್ಯರ ಚುನಾವಣಾ ಸಭೆಯಲ್ಲಿ ಹಾಜರಾಗಿದ್ದ 11 ಮಂದಿ ಜಿಲ್ಲಾ ಪಂಚಾಯಿತಿ ಸದಸ್ಯರು ಕೃಷಮೂರ್ತಿ ಮತ್ತು ಪದ್ಮಾವತಿ ಮುನೇಗೌಡ ಪರವಾಗಿ ಸಹಿ ಹಾಕುವ ಮೂಲಕ ನೂತನ ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಹಾಗೂ ಯೋಜನಾ ಸ್ಥಾಯಿ ಸಮಿತಿ ಹಾಗೂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಹಾಗೂ ಯೋಜನಾ ಸ್ಥಾಯಿ ಸಮಿತಿ ನೂತನ ಸದಸ್ಯರಾದ ಕೃಷ್ಣಮೂರ್ತಿ ಮತ್ತು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ನೂತನ ಸದಸ್ಯರಾದ ಪದ್ಮಾವತಿ ಮುನೇಗೌಡ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ವಿ.ಪ್ರಸಾದ್, ಉಪಾಧ್ಯಕ್ಷರಾದ ರೂಪ ಮರಿಯಪ್ಪ ಸೇರಿದಂತೆ ಜಿಲ್ಲಾ ಪಂಚಾಯಿತಿ ಸದಸ್ಯರು ಅಭಿನಂದಿಸಿದರು.