ಬೆಂಗಳೂರು (ಗ್ರಾ): ಜಿಲ್ಲೆಯ ಜೀತ ವಿಮುಕ್ತರು ಹಾಗೂ ಸಫಾಯಿ ಕರ್ಮಚಾರಿಗಳು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದು, ಗೌರವಯುತ ಜೀವನ ರೂಪಿಸಿಕೊಂಡು ಸಮಾಜದಲ್ಲಿ ಸಮಾನತೆ ಹಾಗೂ ನೆಮ್ಮದಿಯುತ ಜೀವನ ನಡೆಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಪ್ರತಿಪಾದಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವತಿಯಿಂದ ದೇವನಹಳ್ಳಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜೀತ ವಿಮುಕ್ತರ ಮತ್ತು ಸಫಾಯಿ ಕರ್ಮಚಾರಿಗಳ ಪುನರ್ವಸತಿ ಶಿಬಿರವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಸಾಲ ಸೌಲಭ್ಯ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಜೀತ ವಿಮುಕ್ತ ಮತ್ತು ಸಫಾಯಿ ಕರ್ಮಚಾರಿಗಳು ಅರ್ಜಿ ಸಲ್ಲಿಸಿದಾಗ ಇಲಾಖೆಗಳೇ ಮುತುವರ್ಜಿ ವಹಿಸಿ, ನೈಜ ಫಲಾನುಭವಿಗಳಿಗೆ ಶೀರ್ಘವಾಗಿ ನಿಗದಿತ ಅವಧಿಯಲ್ಲಿ ಸೇವೆ ತಲುಪುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜೀತ ವಿಮುಕ್ತ ಮತ್ತು ಸಫಾಯಿ ಕರ್ಮಚಾರಿಗಳು ಬ್ಯಾಂಕ್ ಖಾತೆ ತೆರೆಯಲು ಬಂದಂತಹ ಸಂದರ್ಭದಲ್ಲಿ ಸರ್ಕಾರ ಅವರಿಗೆ ನೀಡಿರುವ ಗುರುತಿನ ಚೀಟಿಯನ್ನು ರಾಷ್ಟ್ರೀಕೃತ ಹಾಗೂ ಲೀಡ್ ಬ್ಯಾಂಕುಗಳು ದಾಖಲೆಯಾಗಿ ಪರಿಗಣಿಸಿ, ಶೂನ್ಯ ಉಳಿತಾಯ ಖಾತೆ ತೆರೆದು ಕೊಡಬೇಕೆಂದು ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರಿಗೆ ತಿಳಿಸಿದರು.
ಅನಾದಿ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ಕೆಲವು ಅನಿಷ್ಠ ಪದ್ದತಿಯಿಂದ ವಿಮುಕ್ತಿಗೊಂಡು, ಇಂದಿನ ಶಿಬಿರದಲ್ಲಿ ನೀಡುವ ಮಾಹಿತಿಯನ್ನು ಸರಿಯಾಗಿ ಆಲಿಸಿ, ವಿವಿಧ ಇಲಾಖೆವಾರು ಜಾರಿಯಲ್ಲಿರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಸಹಬಾಳ್ವೆಯಿಂದ ಸಮಾಜದಲ್ಲಿ ಎಲ್ಲರಂತೆ ಬದುಕು ಕಟ್ಟಿಕೊಳ್ಳಲು ತಿಳಿಸಿದರು.
ವಿವಿಧ ಇಲಾಖೆಗಳು ಜೀತಪದ್ದತಿಯಿಂದ ವಿಮುಕ್ತಿ ಹೊಂದಿದವರಿಗೆ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸಬೇಕು ಎಂದರಲ್ಲದೆ, ಯಾವೊಬ್ಬ ಅರ್ಹ ಫಲಾನುಭವಿಯು ಇದರಿಂದ ವಂಚಿತರಾಗಬಾರದು ಎಂದರು.
ಜೀತಪದ್ದತಿಯಿಂದ ವಿಮುಕ್ತಿ ಹೊಂದಿದವರಿಗೆ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಅತಿಮುಖ್ಯವಾಗಿ ಮೂಲಭೂತ ಸೌಕರ್ಯಗಳಾದ ಮನೆ ನಿರ್ಮಾಣಕ್ಕೆ ಹಣಕಾಸು ಸಹಾಯ, ನರೇಗಾ ಯೋಜನೆಯಡಿ ಮನೆಗೆ ಬೇಕಾದ ಸೌಲಭ್ಯಗಳು, ನಮ್ಮ ರಸ್ತೆ ನಮ್ಮ ಯೋಜನೆ, ಶೌಚಾಲಯ ನಿರ್ಮಾಣ, ಕೈತೋಟಗಳ ನಿರ್ಮಾಣ, ಹೊಲಗಳಿಗೆ ಬದು ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಗಳನ್ನು ಮಾಡಬಹುದಾಗಿದ್ದು ಅವರ ಮಕ್ಕಳಿಗೆ ಶಿಕ್ಷಣ, ಸ್ಕಾಲರ್‌ಶಿಪ್ ಹಾಗೂ ಉನ್ನತ ಶಿಕ್ಷಣಕ್ಕೆ ಬೇಕಾದ ಸೌಲಭ್ಯ ಸೇರಿದಂತೆ ಆರೋಗ್ಯ ಸೌಲಭ್ಯಗಳನ್ನು ಸಹ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದ ಶಿಬಿರದಿಂದ ಎಲ್ಲಾ ಸಮನ್ವಯ ಅಧಿಕಾರಿಗಳು ಒಟ್ಟುಗೂಡಿ ಉತ್ತಮ ಜೀವನ ನಡೆಸಲು ಬೇಕಾಗಿರುವ ಯೋಜನೆಗಳ ಸೌಲಭ್ಯ ಪಡೆಯಲು ಈ ಶಿಬಿರ ಸಹಕಾರಿಯಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ನೋಡಲ್ ಅಧಿಕಾರಿ ಕೃಷ್ಣಪ್ಪ ಮಾತನಾಡಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಕಾಯ್ದೆ ಅಡಿಯಲ್ಲಿ ಮಲ ಹೊರುವ ಹಾಗೂ ಜೀತ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಜೊತೆಗೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಗುರುತಿನ ಚೀಟಿ ನೀಡುವ ಕಾರ್ಯವಾಗುತ್ತಿದ್ದು, ಪ್ರಥಮ ಆದ್ಯತೆಯಾಗಿ ರೂ. 40,000 ಸಹಾಯಧನ ಹಾಗೂ ನಿವೇಶನವನ್ನು ನೀಡುವ ಯೋಜನೆಯನ್ನು ಸರ್ಕಾರ ಒದಗಿಸುತ್ತಿದೆ ಎಂದು ಮಾಹಿತಿ ನೀಡಿದರು.
ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಎ.ಹೆಚ್.ನಾಗರಾಜು ಮಾತನಾಡಿ ಪುರಸಭೆ ವತಿಯಿಂದ ಸಫಾಯಿ ಕರ್ಮಚಾರಿಗಳಿಗೆ ಹಾಗೂ ಪೌರಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ, ಆಹಾರ ಹಾಗೂ ಅವರ ಕುಟುಂಬಕ್ಕೆ ಶೈಕ್ಷಣಿಕ ಸೌಲಭ್ಯದಂತಹ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಸೌಲಭ್ಯದ ಮಾಹಿತಿ ಇಲ್ಲದವರು, ವಂಚಿತರು ತಮ್ಮ ಹಕ್ಕನ್ನು ಕೇಳಿಪಡೆಯುವ ಮೂಲಕ ಸಬಲೀಕರಣಗೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮುನಿಕೃಷ್ಣಪ್ಪ, ದೇವನಹಳ್ಳಿ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ವಸಂತಕುಮಾರ್, ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಮುರಡಯ್ಯ, ಹೊಸಕೋಟೆ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ, ನೆಲಮಂಗಲ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಲಕ್ಷ್ಮೀನಾರಾಯಣ್
ಸಮಾಜ ಕಲ್ಯಾಣ ಇಲಾಖೆ ನೋಡಲ್ ಅಧಿಕಾರಿ ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ, ಲೀಡ್ ಬ್ಯಾಂಕ್ ಬೆಂಗಳೂರು ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರು, ವಿವಿಧ ಇಲಾಖೆ, ನಿಗಮ, ಮಂಡಳಿಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಸಫಾಯಿ ಕರ್ಮಚಾರಿಗಳು, ಜೀತ ವಿಮುಕ್ತರು ಉಪಸ್ಥಿತರಿದ್ದರು.