ದೆಹಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಇದೀಗ ಮತ್ತೊಂದು ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಗಿದೆ. ಕೆಲವು ದಿನಗಳ ಹಿಂದೆ ನಡೆದ ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನ ಪಡೆದರೂ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದ ಮೊಹಮ್ಮದ್ ಹ್ಯಾರಿಸ್ ನಲ್ಪಾಡ್ ಅವರನ್ನು ಎಐಸಿಸಿಯು ಪ್ರದೇಶ ಯುವ ಸೈನ್ಯದ ದಂಡನಾಯಕನನ್ನಾಗಿ ನೇಮಕ ಮಾಡಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ. ಈ ಕುರಿತ ಸುದ್ದಿಯ ಮೇಲೆ ಚರ್ಚೆಯೊಂದು ಕೆಪಿಸಿಸಿ ಕಚೇರಿ ಅಂಗಳದಲ್ಲಿ ನಡೆಯುತ್ತಿದೆ.
ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪ್ಪಾಡ್ ಅವರನ್ನು ನೇಮಕ ಮಾಡಿದ್ದು, ಈ ವರೆಗೂ ಆ ಸ್ಥಾನ ಆಲಂಕರಿಸುವರೆನ್ನಲಾಗಿದ್ದ ರಕ್ಷಾ ರಾಮಯ್ಯ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ.
ದೆಹಲಿಯಲ್ಲಿ ಈ ಅಚ್ಚರಿಯ ಬೆಳವಣಿಗೆಗೆ ಹೈಕಮಾಂಡ್ ಮುನ್ನುಡಿ ಬರೆದಿದೆ.
ಇತ್ತೀಚೆಗೆ ಯುವ ಕಾಂಗ್ರೆಸ್‌ಗೆ ನಡೆದ ಚುನಾವಣೆಯಲ್ಲಿ ಮೊಹಮ್ಮದ್ ನಲಪ್ಪಾಡ್ ಅವರು ಆ್ಯಪ್ ಮೂಲಕ ಹೆಚ್ಚು ಮತ ಪಡೆದರೂ ತಾಂತ್ರಿಕ ಕಾರಣದಿಂದಾಗಿ ಅವರನ್ನು ಅಧ್ಯಕ್ಷ ಸ್ಥನದಿಂದ ದೂರ ಇಡಲಾಗಿತ್ತು. ಎರಡನೇ ಅತೀ ಹೆಚ್ಚು ಮತಗಳನ್ನು ಪಡೆದಿದ್ದ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಇದಕ್ಕೆ ಯುವ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಆದರೆ ಇದೀಗ ಮೊಹಮ್ಮದ್ ಹ್ಯಾರಿಸ್ ನಲಪ್ಪಾಡ್ ಅವರಿಗೇ ಯುವ ಕಾಂಗ್ರೆಸ್‌ನ ಸಾರಥಿಯಾಗುವ ಭಾಗ್ಯ ಸಿಗುತ್ತಿದೆ ಎಂದು ಹೇಳಲಾಗುತ್ತಿದೆ.