ಬೆಂಗಳೂರು: ಸಾಮಾಜಿಕ ಹರಿಕಾರ, ಧಾರ್ಮಿಕ ಸಮಾನತೆಯ ಸಂತ ಶ್ರೀ ನಾರಾಯಣಗುರುಗಳ ಆಶೋತ್ತರಗಳನ್ನು ಈಡೇರಿಸಲು ಸಾಮಾಜಿಕ ಕಾರ್ಯಕರ್ತರ ವೇದಿಕೆಯೊಂದು ರೂಪುಗೊಂಡಿದೆ. ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗೆ ಸಂಕಲ್ಪ ತೊಟ್ಟಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಸಾರಥ್ಯದಲ್ಲಿ ಶ್ರೀ ನಾರಾಯಣಗುರು ಕೋ-ಆಪರೇಟಿವ್ ಸೊಸೈಟಿ ರೂಪುಗೊಂಡಿದ್ದು ಈ ಹಣಕಾಸು ಸಂಸ್ಥೆ ಗುರುವಾರ ಉದ್ಘಾಟನೆಯಾಗಲಿದೆ.
ಸಮಾನತೆಯ ಹರಿಕಾರ, ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶ್ರೀ ನಾರಾಯಣ ಗುರು ಅವರ ಸವಿಸ್ಮರಣೆ ಮೂಲಕ ಶ್ರೀ ನಾರಾಯಣಗುರು ಕೋ-ಆಪರೇಟಿವ್ ಸೊಸೈಟಿ ಅಸ್ತಿತ್ವಕ್ಕೆ ಬಂದಿದ್ದು, ಉದ್ಯಮ ಅಪೇಕ್ಷಿತರಿಗೆ ಆರ್ಥಿಕ ಶಕ್ತಿ ತುಂಬುವ ಮಹಾದುದ್ದೇಶದಿಂದ, ದೇಶದ ಪ್ರತಿಷ್ಠಿತ ಆಹಾರೋದ್ಯಮ ಸಂಸ್ಥೆ ChefTalkನ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿಯವರು ಈ ನೂತನ ಸೊಸೈಟಿಯನ್ನು ಕಟ್ಟಿದ್ದಾರೆ.
ಜನವರಿ 28ರಂದು ಗುರುವಾರ ಬೆಳಗ್ಗೆ 10-30ಕ್ಕೆ ಬೆಂಗಳೂರು ವಿಜಯನಗರದ ವೇಣುಗೋಪಾಲ್ ಆರ್ಕೆಡ್ (1ನೇ ಮುಖ್ಯರಸ್ತೆ,1ನೇ ಅಡ್ಡರಸ್ತೆ ಕ್ಲಬ್ ರೋಡ್) ನಲ್ಲಿ ಹಣಕಾಸು ವಹಿವಾಟಿಗೆ ಚಾಲನೆ ಸಿಗಲಿದೆ.
ಗೌರಿಗದ್ದೆ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ನ ಶ್ರೀ ಅವಧೂತ ವಿನಯ ಗುರೂಜಿ, ಕಾರ್ಕಳದ ಶ್ರೀ ಕ್ಷೇತ್ರ ಬಲ್ಯೋಟ್ಟು ಮಠಾಧೀಶ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕೇರಳ ಶಿವಗಿರಿಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ, ಅರೇಮಲ್ಲಾಪುರ ಶ್ರೀ ಶರಣ ಬಸವೇಶ್ವರ ಮಹಾಸಂಸ್ಥಾನದ ಶ್ರೀ ಪ್ರಣವಾನಂದ ಮಹಾಸ್ವಾಮೀಜಿ, ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದ ಅನುವಂಶಿಕ ಧರ್ಮದರ್ಶಿ ಡಾ.ಎಸ್.ರಾಮಪ್ಪಜಿ ಅವರ ಉಪಸ್ಥಿತಿಯಲ್ಲಿ ಈ ಸೊಸೈಟಿ ಉದ್ಘಾಟನೆಯಾಗಲಿದೆ ಎಂದು ಸೊಸೈಟಿಯ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ.
ಲೋಕಸಭಾ ಸದಸ್ಯರು, ಶಾಸಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯಅತಿಥಿಗಳು ಈ ಸಮಾರಂಭದಲ್ಲಿ ಭಾಗವಹಿಸಲ್ಲಿದ್ದಾರೆ ಎಂದವರು ತಿಳಿಸಿದ್ದಾರೆ.