ಬೆಂಗಳೂರು: ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಕಾನೂನನ್ನು ಎಷ್ಟೇ ಬಿಗಿಗೊಳಿಸಿದರೂ ಸ್ವಾರ್ಥಿಗಳಿಗೆ ಅಂಕುಶ ಹಾಕಲು ಪೊಲೀಸರಿಂದ ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಆದರೆ ಕೇಸೊಂದರಲ್ಲಿ ಬೆಂಗಳೂರಿನ ಜೆ.ಸಿ.ನಗರ ಠಾಣೆಯ ಪೊಲೀಸರು ಆರೋಪಿಯ ಹೆಜ್ಜೆ ಜಾಡು ಬೆನ್ನಟ್ಟಿ ಪ್ರಕರಣವನ್ನು ಬೇಧಿಸಿ ಶಹಬ್ಬಾಸ್’ಗಿರಿ ಗಿಟ್ಟಿಸಿಕೊಂಡಿದ್ದಾರೆ.
ಯುವತಿಯೊಬ್ಬಳಿಗೆ ನಿರಂತರ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ವ್ಯಕ್ತಿಯೊಬ್ಬ ಏನೋ ಹಠಕ್ಕೆ ಬಿದ್ದು ಆಕೆಯ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿಯಬಿಡುತ್ತಿದ್ದ. ಆಕೆಯ ಫೋಟೋಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಿಂಬಿಸಿ ವಾಟ್ಸಾಪ್, ಫೇಸ್ಬುಕ್’ಗಳಲ್ಲಿ ಪೋಸ್ಟ್ ಮಾಡುತ್ತಿದ್ದ. ಈ ಪೋಸ್ಟ್’ಗಳನ್ನು ನೋಡಿದವರು ರಾತ್ರಿ ಹಗಳೆನ್ನದೆ ಈ ಯುವತಿಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು. ಕಳೆದ ಫೆಬ್ರವರಿಯಲ್ಲಿ ದಾಖಲಾದ ಈ ಪ್ರಕರಣದ ತನಿಖೆ ಕಿಗೆತ್ತಿಕೊಂಡ ಪೊಲೀಸ್ ಸಬ್ ಇನ್’ಸ್ಪೆಕ್ಟರ್ ವಿನೋದ್ ಜಿರಗಾಲೆ ಆರೋಪಿಯ ಕೃತ್ಯಗಳನ್ನು ಎಲೆಎಲೆಯಾಗಿ ಗುರುತಿಸಿ, ಸಾಕ್ಷಿಗಳನ್ನೂ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಸೈಬರ್ ಕ್ರೈಂ ತಜ್ಞರ ಸಹಾಯದಿಂದ ವಾಟ್ಸಾಪ್, ಫೇಸ್ಬುಕ್ ಸಂದೇಶಗಳ ಮೂಲವನ್ನು ಪತ್ತೆ ಮಾಡಿದ್ದಲ್ಲದೆ, ಈ ಪಿಎಸೈ ಆ ಆಗಂತುಕನ ಕೃತ್ಯಗಳ ಸಿಸಿಟಿವಿ ಫೂಟೇಜ್ ಸಂಗ್ರಹಿಸುವಲ್ಲೂ ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ?
ಯುವಕನೊಬ್ಬ ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿಯೊಬ್ಬಳನ್ನು ಹಿಂಬಾಲಿಸುತ್ತಿದ್ದ. ಆತನ ನಡೆಗೆ ಯುವತಿ ಆಕ್ಷೇಪಿಸಿದ್ದರೂ ಹೇಗಾದರೂ ಆಕೆಯ ಮನ ಗೆಲ್ಲಬೇಕೆಂದು ಹೋರಟ ವ್ಯಕ್ತಿ ಆರಿಸಿಕೊಂಡದ್ದು ಸಾಮಾಜಿಕ ಜಾಲತಾಣಗಳನ್ನು. ಆಕೆ ತನ್ನ ಮಾತಿಗೆ ಮರುಳಾಗದಿದ್ದಾಗ ಆ ಯುವತಿಯ ಬಗ್ಗೆ ಆಕ್ಷೇಪಾರ್ಹವಾಗಿ ಸಂಬಂಧ ಬಿಂಬಿಸುವ ಪ್ರಯತ್ನವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾನೆನ್ನಲಾಗಿದೆ. ಅಷ್ಟೇ ಅಲ್ಲ, ಆಕೆಯ ಫೋಟೋಗಳನ್ನು ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಲಿ ಹುಡುಗರ ವಿವಿಧ ಗ್ರೂಪ್’ಗಳಿಗೆ ಹಾಕಿ, ಈಕೆಯನ್ನು ವೇಶ್ಯೆ ಎಂಬಂತೆ ಬಿಂಬಿಸಿದ್ದಾನೆ. ಅಷ್ಟೇ ಅಲ್ಲ ಆಕೆಯ ಸಹೋದ್ಯೋಗಿಗಳ ಹಾಗೂ ಸಂಬಂಧಿಗಳ ಫೋನ್ ನಂಬರ್’ಗಳನ್ನೂ ಹಾಕಿ ಅವರನ್ನು ಪಿಂಪ್’ಗಳೆಂಬಂತೆ ಬಿಂಬಿಸಿದ್ದಾನೆ. ಆಕೆ ಹಾಗೂ ಸಂಬಂಧಿಗಳಿಗೆ ದೇಶ ವಿದೇಶಗಳಿಂದ ನಿರಂತರ ಫೋನ್ ಕರೆಗಳು ಬರಲಾರಂಭಿಸಿದ್ದು ಕರೆ ಮಾಡಿದವರ ಆಕ್ಷೇಪಾರ್ಹ ಮಾತುಗಳು ಇವರನ್ನು ಗಲಿಬಿಲಿಗೊಳಿಸಿತ್ತು. ಈ ಕಿರುಕುಳದಿಂದ ಬೇಸತ್ತ ಯುವತಿ ಫೆಬ್ರವರಿ 29ರಂದು ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ (20/2020) ದಾಖಲಿಸಿ ತನಿಖೆ ಆರಂಭಿಸಿದ ಹೊತ್ತಲ್ಲೇ ಕೊರೋನಾ ಹಾವಳಿ ಎದುರಾಗಿದ್ದರಿಂದ ಪಿಎಸ್’ಐ ವಿನೋದ್ ಜಿರಗಾಳೆ ಅವರ ತನಿಖೆಗೆ ಪರಿಸ್ಥಿತಿ ಅಡ್ಡಿಯಾಯಿತಾದರ ಆ ಸಮಯದಲ್ಲಿ ಸೈಬರ್ ಕ್ರೈಮ್ ತಜ್ಞರ ಸಹಾಯದಿಂದ ವಾಟ್ಸಾಪ್, ಫೇಸ್ಬುಕ್ ಸಂದೇಶಗಳ ಮೂಲವನ್ನೇ ಕೆದಕಿದ್ರು. ಬೆಂಗಳೂರು ಮಾತ್ರವಲ್ಲ ದೆಹಲಿ ಸಹಿತ ಹಲವೆಡೆಯಿಂದ ಮಾಹಿತಿ ಸಂಗ್ರಹಿಸಿ ಕೃತ್ಯವನ್ನೇ ಬೇಧಿಸುವಲ್ಲಿ ಯಶಸ್ವಿಯಾದರು.
ಯಾರದೋ ನಂಬರ್, ಎಲ್ಲಿಂದಲೋ ಕರೆ
ಆದರೆ ಈ ಸಂದೇಶಗಳನ್ನು ಹರಿಯಬಿಟ್ಟಿದ್ದ ವ್ಯಕ್ತಿ ತನ್ನ ಸ್ವಂತ ನಂಬರನ್ನು ಅದಕ್ಕೆ ಬಳಸಿರಲಿಲ್ಲ. ಹಾಗಾಗಿ ಸಂದೇಶ ಯಾವ ನಂಬರಿನಿಂದ ಹಾಕಲಾಗಿತ್ತೋ ಆ ನಂಬರಿನ ವ್ಯಕ್ತಿಗಳನ್ನು ಪತ್ತೆ ಮಾಡಿ ವಿಚಾರಿಸಿದಾಗ ಪೊಲೀಸರೀಗೂ ಶಾಕ್.. ಬೇಸಿಕ್ ಸೆಟ್ ಇದ್ದವರನ್ನೇ ಈ ಆರೋಪಿ ಹುಡುಕಾಡಿ, ಅರ್ಜೆಂಟ್ ಕಾಲ್ ಮಾಡುವ ನೆಪದಲ್ಲಿ ಫೋನ್ ಪಡೆದು, ಅವರ ನಂಬರಿನಿಂದ ಒಟಿಪಿ ತರಿಸಿ, ತನ್ನ ಮೊಬೈಲ್’ನಲ್ಲಿ ವಾಟ್ಸಾಪ್ ಎಕ್ಸೆಸ್ ಮಾಡುತ್ತಿದ್ದ. ಆ ಮೂಲಕ ಯಾರದೋ ಅಮಾಯಕರ ನಂಬರಿನಲ್ಲಿ ಈಕೆಯ ವರ್ಚಸ್ಸು ಹಾಳುಮಾಡುವ ಪ್ರಯತ್ನ ನಡೆಸುತ್ತಿದ್ದ. ಮಾಗಡಿ ರಸ್ತೆಯ ಬುಕ್ ಬೈಂಡರ್, ಆರ್.ಟಿ.ನಗರದ ಆರ್.ಟಿ.ಓ ಏಜಂಟ್, ಮೆಜೆಸ್ಟಿಕ್ ಬಿಳಿಯ ವೃದ್ಧ ಹೀಗೆ ಅನೇಕರ ಹೆಸರಲ್ಲಿ ಈ ವಾಟ್ಸಾಪ್ ಸಂದೇಶಗಳು ಪೋಸ್ಟ್ ಆಗಿವೆ. ಅವರ ಮೂಲಕ ಆರೋಪಿ ಎಲ್ಲೆಲ್ಲಾ ಫೋನ್ ಪಡೆದು ಕೃತ್ಯ ಎಸಗಿದ್ದಾನೋ ಆ ಸ್ಥಳದಲ್ಲಿನ ಸಿಸಿಟಿವಿ ಫ್ಹೂಟೆಜ್ ಸಂಗ್ರಹಿಸಿದ ಪಿಎಸೈ ವಿನೋದ್ ಜಿರಗಾಳೆ, ಜಾಣತನದಿಂದಲೇ ಸಾಕ್ಷ್ಯಗಳನ್ನು ಕಲೆ ಹಾಕಿ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ.
ಈ ನಡುವೆ, ಬನಶಂಕರಿ ಮೂಲದ ಈ ಆರೋಪಿಯ ವಿಳಾಸ ಪತ್ತೆ ಮಾಡಿ ಆತನ ಬಂಧನಕ್ಕೆ ಪಿಎಸೈ ವಿನೋದ್ ನೇತೃತ್ವದ ತಂಡ ಮುಂದಾಯಿತಾದರೂ ಆತ ಅಷ್ಟರಲ್ಲೇ ತಲೆಮರೆಸಿಕೊಂಡಿದ್ದ. ಇದೀಗ ಮತ್ತೆ ಆತನ ಮನೆಗೆ ನೋಟೀಸ್ ಕಳುಹಿಸಿರುವ ಪೊಲೀಸರು ಆರೋಪಿಯ ಬಂಧನಕ್ಕೂ ಬಲೆ ಬೀಸಿದ್ದಾರೆ.