ರಾಜಕೀಯ ಸನ್ನಿವೇಶಗಳಲ್ಲಿ ರಾಜಿಯಿಲ್ಲದ ನಡೆ. ಆದರೆ ಸಾಮಾಜಿಕ ಜೀವನದಲ್ಲಿ?
ಹೌದು ಈ ನಾಯಕರು ರಾಜಕೀಯ ವಲಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿದ್ದಾರೆಯೇ ಹೊರತು ನಿಜ ಜೀವನದಲ್ಲಿ ಸಮ್ಮಿತ್ರರು ಎಂಬುದಕ್ಕೆ ಅನೇಕ ಸನ್ನಿವೇಶಗಳು ಉದಾಹರಣೆಯಾಗಿವೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಈ ಮೂವರು ನಾಯಕರು ಮುಖಾಮುಖಿಯಾದಾಗಲೂ ಒಂದು ಅಚ್ಚರಿಯ ಸನ್ನಿವೇಶ ಸೃಷ್ಟಿಯಾಯಿತು.
ಪ್ರವಾಸ ನಿಮಿತ್ತ ಉತ್ತರ ಕರ್ನಾಟಕ ಪ್ರವಾಸ ತೆರಳಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಯಡಿಯೂರಪ್ಪ ಶನಿವಾರ ಪರಸ್ಪರ ಟೀಕಾಸ್ತ್ರ ಪ್ರಯೋಗಿಸಿ ಒಬ್ಬರನ್ನೊಬ್ಬರು ಕೆಣಕಿದ್ದರು. ಅದೇ ದಿನ ಸಂಜೆ ಬೆಂಗಳೂರಿಗೆ ವಾಪಾಸಾದ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡರು.

ಬೆಳಗಾವಿಯ ಸಾಂಬ್ರ ವಿಮಾನ ನಿಲ್ದಾಣದಲ್ಲಿ ಈ ಮೂವರು ಹಿರಿಯ ನಾಯಕರು ಮುಖಾಮುಖಿಯಾದ ಸಂದರ್ಭ ಅಚ್ಚರಿಯ ಸನ್ನಿವೇಶಕ್ಕೆ ಕಾರಣವಾಯಿತು. ರಾಜಕೀಯ ಮರೆತು ಕುಶಲೋಪರಿ ಸಮಾಲೋಚನೆಗೆ ಅವರು ಶರಣಾಗಿದ್ದರು. ಅಲ್ಲಿ ಒಂದಷ್ಟು ತಮಾಷೆಯ ಮಾತುಗಳು ಇವರ ಗಾಂಭೀರ್ಯಕ್ಕೆ ಅಡ್ಡಿಯಾಗುತ್ತಲಿತ್ತು ಎನ್ನುವುದಕ್ಕಿಂತ ಇವರ ನಡುವೆ ಗಾಂಭೀರ್ಯಕ್ಕಿಂತ ತಮಾಷೆಯೇ ಹೆಚ್ಚು ಎಂಬಂತಿತ್ತು.

























































