ಬೆಂಗಳೂರು: ತೆರದಾಳದಲ್ಲಿ ಪುರಸಭೆ ಮಹಿಳಾ ಸದಸ್ಯರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯಮಂತ್ರಿಗಳಾಗಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಲಿ, ಬಿಜೆಪಿ ಮಹಿಳಾ ಸಂಘಟನೆಗಳಾಗಲಿ ಮೌನ ವಹಿಸಿರುವುದೇಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರೂಣ ಹತ್ಯೆ ಎಂದರೆ ಕೊಲೆಗೆ ಸಮ. ಜತೆಗೆ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ನಡೆದಿದೆ. ಇದು ಮಾನಭಂಗ ಹಾಗೂ ದೌರ್ಜನ್ಯದ ಪ್ರಕರಣ. ಮಹಾಭಾರತದಲ್ಲಿ ದುಶ್ಶಾಸನನ ದೌರ್ಜನ್ಯ ಕಣ್ಣೆದುರು ಕಂಡಂತೆ ಈ ಪ್ರಕರಣವನ್ನು ಮಾಧ್ಯಮಗಳು ತೋರಿಸಿವೆ. ಆದರೂ ಈವರೆಗೂ ಪೊಲೀಸರು ಪ್ರಕರಣ ದಾಖಲಿಸಿ, ಯಾರೊಬ್ಬರನ್ನೂ ಬಂಧಿಸಿಲ್ಲ ಎಂದು ಕಿಡಿ ಕಾರಿದರು.
ಮುಖ್ಯಮಂತ್ರಿಗಳಾಗಲಿ, ಮಹಿಳಾ ಸಚಿವರಾಗಲಿ, ಶೋಭಾ ಕರಂದ್ಲಾಜೆ ಅವರಾಗಲಿ, ದೇಶದಲ್ಲಿರುವ ಮಹಿಳಾ ಸಂಘಟನೆಗಳಾಗಲಿ ಯಾರೊಬ್ಬರೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಇದು ಕೇವಲ ದೇಶ ಮಟ್ಟದಲ್ಲ, ಅಂತಾರಾಷ್ಟ್ರೀಯ ಮಟ್ಟದ ಪ್ರಕರಣ. ಬಿಜೆಪಿಯವರು ದೌರ್ಜನ್ಯ ಎಸಗಿದ ತಮ್ಮ ಶಾಸಕನ ರಕ್ಷಣೆಗಾಗಿ ನಿಂತಿರುವುದು ನಾಚಿಕೆಗೇಡಿನ ವಿಚಾರ. ಮುಖ್ಯಮಂತ್ರಿಗಳೇ ಇದೇ ಪರಿಸ್ಥಿತಿ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಬಂದಿದ್ದರೆ, ಶೋಭಾ ಕರಂದ್ಲಾಜೆ ಅವರೇ ಹಾಗೂ ಶಶಿಕಲಾ ಜೊಲ್ಲೆ ಅವರೇ ನಿಮಗೆ ಈ ರೀತಿ ಆಗಿದ್ದರೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.
ಈ ವಿಚಾರವಾಗಿ ನಾನು, ನಮ್ಮ ವಿರೋಧ ಪಕ್ಷದ ನಾಯಕರು ಹಾಗೂ ಮಹಿಳಾ ಶಾಸಕರು ಇಂದು ತೆರದಾಳಕ್ಕೆ ಹೋಗಿ ಸಂತ್ರಸ್ತರ ಪರ ನಿಲ್ಲಲು ನಿರ್ಧರಿಸಿದ್ದೇವೆ. ಅಧಿವೇಶನದಲ್ಲೂ ಈ ವಿಚಾರವಾಗಿ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಡಿಕೆಶಿ ತಿಳಿಸಿದರು.
ಈ ಪ್ರಕರಣ ಮಾನವೀಯತೆ ಹಾಗೂ ಹೆಣ್ಣಿನ ಕುಲಕ್ಕೆ ಮಾಡಿರುವ ಅಪಮಾನ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯೇ ಆ ಘಟನೆಗೆ ಕಾರಣರಾದವರ ಬಗ್ಗೆ ಹೇಳಿದ ನಂತರವೂ ಇನ್ನು ಅವರನ್ನು ಬಂಧಿಸಿಲ್ಲ ಎಂದರೆ, ಈ ಸರ್ಕಾರದಲ್ಲಿ ಮಹಿಳೆಯರಿಗೆ ಯಾವ ರೀತಿಯ ರಕ್ಷಣೆ, ಗೌರವ ಸಿಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದು ಡಿಕೆಶಿ ಛೇಡಿಸಿದರು.