ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮವನ್ನು ರಚಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಆದರೆ ಈ ವರೆಗೂ ಯಾವುದೇ ಸಂಘಟನೆ ಪ್ರತಿಭಟನೆ ಸಂಬಂಧ ಪೊಲೀಸ್ ಇಲಾಖೆಯಿಂದ ಅನುಮತಿ ಕೋರಿಲ್ಲ.
ಬಂದ್, ಪ್ರತಿಭಟನೆಗೆ ಕರೆ ನೀಡುವ ಸಂದರ್ಭದಲ್ಲಿ ಪರಿಸ್ಥಿತಿಯು ಕಾನೂನು ಸುವ್ಯವಸ್ಥೆಗೆ ಸವಾಲಾಗುತ್ತದೆ. ಈ ಕಾರಣದಿಂದಾಗಿ ಬಂದ್, ಪ್ರತೊಭಟನೆಗೂ ಮುನ್ನ ಪೊಲೀಸ್ ಇಲಾಖೆಯ ಅನುಮತಿ ಕೋರುವುದು ಕಡ್ಡಾಯವಾಗಿದೆ. ಆದರೆ ಡಿ.5ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕನ್ನಡಪರ ಸಂಘಟನೆಗಳು ಪೊಲೀಸರಿಗೆ ಯಾವುದೇ ಅನುಮತಿ ಪತ್ರ ನೀಡಿಲ್ಲವಂತೆ.
ಇದುವರೆಗೂ ಬೆಂಗಳೂರಿನಲ್ಲಿ ಕರ್ನಾಟಕ ಬಂದ್‌ಗೆ ಯಾರೂ ನಮ್ಮ ಬಳಿ ಅನುಮತಿ ಕೇಳಿಲ್ಲ, ನಾವೂ ಕೊಟ್ಟಿಲ್ಲ ಎಂದು ಕಮಲ್ ಪಂತ್ ತಿಳಿಸಿದ್ದಾರೆ.
ಆದರೂ, ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು ಮತ್ತು ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಬೆಂಗಳೂರಿನಲ್ಲಿ ನಾಳೆ ಯಾವುದೇ ಅಹಿತಕರ ಘಟನೆ ನಡೆಯಬಾರದು. ಹೀಗಾಗಿ, 15 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆಯಿಂದ ಪೊಲೀಸರು ಎಲ್ಲಾ ಕಡೆ ಗಸ್ತು ತಿರುಗಲಿದ್ದಾರೆ. 5 ಜನ ಅಡಿಷನ್ ಸಿಪಿಗಳು, ಡಿಸಿಪಿಗಳು, ಎಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್‌ಗೆ ಕ್ರಮ ಕೈಗೊಳ್ಳಲಾಗಿದೆ.