ಬೆಂಗಳೂರು: ಡಿಜಿಟಲ್ ತಾಂತ್ರಿಕತೆಯ ಬೆಳವಣಿಗೆಗೆ ಪೂರಕವಾಗಿ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಿರುವ ಕೇಂದ್ರ ಸರ್ಕಾರವು 1000 ದಿನಗಳಲ್ಲಿ 6 ಲಕ್ಷ ಕಿ.ಮೀ. ಉದ್ದದಷ್ಟು ಆಪ್ಟಿಕ್ ಫೈಬರ್ ಕೇಬಲ್ ಜಾಲ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ ಎಂದು ಕೇಂದ್ರ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಹೇಳಿದರು.
ಮೂರು ದಿನಗಳ ಕಾಲ ನಡೆಯಲಿರುವ ದೇಶದ ಮಹತ್ವದ ತಾಂತ್ರಿಕ ಕಾರ್ಯಕ್ರಮವಾದ “ಬೆಂಗಳೂರು ತಂತ್ರಜ್ಞಾನ ಮೇಳ-2020’ ದ (23ನೇ ಆವೃತ್ತಿ) ಉದ್ಘಾಟನಾ ಕಾರ್ಯಕ್ರಮದಲ್ಲಿ ವರ್ಚ್ಯುಯಲ್ ಆಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೋವಿಡ್ ಸಂದರ್ಭವು ಒಂದೆಡೆ ನಮಗೆ ಸಂಕಷ್ಟವನ್ನು ತಂದೊಡ್ಡಿತು. ಮತ್ತೊಂದೆಡೆ, ಇಲ್ಲಿನ ಡಿಜಿಟಲ್ ತಂತ್ರಜ್ಞಾನ ಪರ್ಯಾವರಣವು ಹೊಸ ಅವಕಾಶಗಳನ್ನು ಸೃಷ್ಟಿಸಿತು. ಜಾಗತಿಕ ತಯಾರಿಕಾ ಕಂಪನಿಗಳು ಕೋವಿಡ್ ಸನ್ನಿವೇಶದಲ್ಲಿ ಭಾರತದೆಡೆಗೆ ಧಾವಿಸಿಬಂದಿವೆ. ಕೋವಿಡ್ ಅವಧಿಯಲ್ಲಿ ದೇಶದ ಮಾಹಿತಿ ತಂತ್ರಜ್ಞಾನ ವಲಯವು ಶೇ 7ರಷ್ಟು ಬೆಳವಣಿಗೆ ಕಂಡಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಕಂಪನಿಗಳು ಭಾರತದಲ್ಲಿ 11 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಮಾಡುವ ನಿರೀಕ್ಷೆ ಇದೆ. ಆಪಲ್ ಕಂಪನಿಯು ತನ್ನ ಫೋನ್ ಹಾಗೂ ಬಿಡಿಭಾಗಗಳನ್ನು ತಯಾರಿಸುವ 11 ಘಟಕಗಳನ್ನು ಪ್ರಮುಖವಾಗಿ ಚೀನಾ ಹಾಗೂ ಇತರ ದೇಶಗಳಿಂದ ಭಾರತಕ್ಕೆ ವರ್ಗಾಯಿಸಿದ್ದು ಅದರ ಲಾಭ ಕರ್ನಾಟಕಕ್ಕೂ ಆಗಿದೆ. ಗೂಗಲ್, ಫೇಸ್ ಬುಕ್ ನಂತಹ ಕಂಪನಿಗಳು ಕೂಡ ಇಲ್ಲಿ ಹೂಡಿಕೆ ಹೆಚ್ಚಿಸಿವೆ ಎಂದು ಹೇಳಿದರು.
“ಡಿಜಿಟಲ್ ಇಂಡಿಯಾ” ಅಭಿಯಾನವು ನಿಜವಾಗಿಯೂ ಭಾರತದಲ್ಲಿ ಪರಿವರ್ತನೆ ತಂದಿದೆ. ಇದು ಎಲ್ಲರನ್ನೂ ಒಳಗೊಳ್ಳಿಸಿಕೊಂಡು ಬದಲಾವಣೆಗೆ ಕಾರಣವಾಗುತ್ತದೆ. ಇದರಿಂದಾಗಿ ಕಳೆದ 5 ವರ್ಷಗಳಲ್ಲಿ ಫಲಾನುಭವಿಗಳಿಗೆ 12 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ವರ್ಗಾವಣೆ ಮಾಡಲು ಸಾಧ್ಯವಾಗಿದೆ. ಸುಮಾರು 1.75 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ಭ್ರಷ್ಟಾಚಾರವನ್ನು ಇದು ತೊಡೆದುಹಾಕಿದೆ ಎಂದು ಪ್ರಸಾದ್ ವಿವರಿಸಿದರು. .