ಬೆಂಗಳೂರು: ನಮ್ಮಪಕ್ಷ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ ಎಂದು ಜನರಿಗೆ ಮನೆಮನೆಗೆ ಹೋಗಿ ಭರವಸೆ ಕೊಟ್ಟಿದ್ದೆವು. 40 ಪರ್ಸೆಂಟ್ ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ ಎಂಬುದು ಸುಳ್ಳು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರು ಅಂದಿನ ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಭ್ರಷ್ಟಚಾರ ಜಾಸ್ತಿಯಾಗಿದೆ. ಕಾಮಗಾರಿಗಳಲ್ಲಿ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದ ಆಧಾರದ ಮೇಲೆ ನಾವು 40 ಪರ್ಸೆಂಟ್ ಆರೋಪ ಮಾಡಿದ್ದೇವೆ.
ನೋಂದಾಯಿತ ಸಂಘವು ಅಧಿಕೃತವಾಗಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಾಗ ನಾವು ಕೂಡ ಪಕ್ಷವಾಗಿ ಜನರ ಹಿತ ದೃಷ್ಟಿಯಿಂದ ಪ್ರಶ್ನೆ ಮಾಡಿದ್ದೇವೆ. ಯಾವ ಆಧಾರದ ಮೇಲೆ 40 ಪರ್ಸೆಂಟ್ ನಡೆದಿಲ್ಲ ಎನ್ನುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಜನಗಳಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತೇವೆ ಎಂದು ನಾವು ಭರವಸೆ ಕೊಟ್ಟಿದ್ದೇವೆ. ಬರೀ 40 ಪರ್ಸೆಂಟ್ ಆರೋಪದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂಬುದು ಸುಳ್ಳು ಎಂದರು.
ವಕ್ಫ್ ವಿಷಯವನ್ನು ಬಿಜೆಪಿಯವರು ರಾಜಕೀಯ ಅಸ್ತ್ರವಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೋಮುಗಲಭೆ, ಶಾಂತಿ ಹಾಳು ಮಾಡಲು ಅವರು ಏನಾದರು ಮಾಡಬಹುದು. ಅದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಮುಂದಕ್ಕೆ ಯಾವರೀತಿ ತೆಗೆದುಕೊಳ್ಳುತ್ತದೆ ಎಂದು ಈಗ ಊಹೆ ಮಾಡಲು ಆಗುವುದಿಲ್ಲ ಎಂದರು.