ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಡಿಸೆಂಬರ್ 28 ರಂದು ಬೆಂಗಳೂರಿನಲ್ಲಿ 269 ಹಾಗೂ ಉಳಿದ ಭಾಗದಲ್ಲಿ 87 ಸೇರಿ ಒಟ್ಟು 356 ಪ್ರಕರಣ ಇತ್ತು. ಜನವರಿ 5 ರಂದು ಬೆಂಗಳೂರಿನಲ್ಲಿ 3,605 ಹಾಗೂ 641 ಪ್ರಕರಣ ರಾಜ್ಯದ ಉಳಿದ ಭಾಗದಲ್ಲಿ ಕಂಡುಬಂದಿತ್ತು. ಜನವರಿ 11 ರಂದು ಬೆಂಗಳೂರಿನಲ್ಲೇ 10,800 ಪ್ರಕರಣ ಹಾಗೂ ರಾಜ್ಯದ ಉಳಿದೆಡೆ 3,673 ಪ್ರಕರಣ ಕಂಡುಬಂತು. ಡಿಸೆಂಬರ್ 28 ರಿಂದ ಜನವರಿ 11 ರವರೆಗೆ (15 ದಿನಗಳಲ್ಲಿ), ಬೆಂಗಳೂರು ನಗರ ಜಿಲ್ಲೆಯಲ್ಲಿ 32.64%, ಬಿಬಿಎಂಪಿ ವ್ಯಾಪ್ತಿಯಲ್ಲಿ 32.65%, ರಾಜ್ಯದಲ್ಲಿ 36.44% ಪ್ರಕರಣದ ಸರಾಸರಿ ಏರಿಕೆ ವೇಗ ಕಂಡುಬಂದಿದೆ ಎಂದು ವಿವರಿಸಿದರು.
ಮೊದಲ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ 10-12 ದಿನಕ್ಕೆ ದುಪ್ಪಟ್ಟಾದ್ದರೆ, ಎರಡನೇ ಅಲೆಯಲ್ಲಿ 8 ದಿನಕ್ಕೆ ಹಾಗೂ ಮೂರನೇ ಅಲೆಯಲ್ಲಿ ಎರಡರಿಂದ ಎರಡೂವರೆ ದಿನದಲ್ಲಿ ದುಪ್ಪಟ್ಟಾಗುತ್ತಿದೆ. ಆದ್ದರಿಂದ ಎರಡನೇ ಡೋಸ್ ಗೆ ಬಾಕಿ ಉಳಿದವರು ಶೀಘ್ರ ಲಸಿಕೆ ಪಡೆಯಬೇಕು. 15-18 ವರ್ಷದ 32 ಲಕ್ಷ ಮಕ್ಕಳಿದ್ದು, 50% ಗೂ ಅಧಿಕ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ 3151 ಪ್ರಕರಣವಿದ್ದು, ಆಸ್ಪತ್ರೆಯಲ್ಲಿ 23%, ಕೋವಿಡ್ ಕೇರ್ ಕೇಂದ್ರದಲ್ಲಿ 3%, ಮನೆ ಐಸೋಲೇಶನ್ ನಲ್ಲಿ 74% ರೋಗಿಗಳು ಇದ್ದರು. ಜನವರಿ 1-11 ರವರೆಗೆ, ಸಕ್ರಿಯ ಪ್ರಕರಣಗಳ ಸಂಖ್ಯೆ 62,641 ಆಗಿದ್ದು, ಆಸ್ಪತ್ರೆಯಲ್ಲಿ 6%, ಕೋವಿಡ್ ಕೇರ್ ಸೆಂಟರ್ ನಲ್ಲಿ 1%, ಮನೆ ಐಸೋಲೇಶನ್ ನಲ್ಲಿ 93% ರೋಗಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.
ಕೋವಿಡ್ ಪರೀಕ್ಷೆಗೆ ಪ್ರತಿ ದಿನ 2 ಲಕ್ಷದ ಗುರಿ ನೀಡಿದ್ದು, ಇನ್ನೂ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ. ಬೆಂಗಳೂರಿನಲ್ಲಿ 1 ಲಕ್ಷದಷ್ಟು ಪರೀಕ್ಷೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 265 ಪರೀಕ್ಷೆ ಲ್ಯಾಬ್ ಸ್ಥಾಪಿಸಿದ್ದು, ಮೊದಲ ಬಾರಿಗೆ 5 ಜೀನೋಮಿಕ್ ಸೀಕ್ವೆನ್ಸ್ ಲ್ಯಾಬ್ ಆರಂಭಿಸಲಾಯಿತು. ಕೇಂದ್ರ ಸರ್ಕಾರ 4 ಸೇರಿ ಒಟ್ಟು 9 ಜೀನೋಮಿಕ್ ಸೀಕ್ವೆನ್ಸ್ ಲ್ಯಾಬ್ ಇದೆ. 1,875 ಮಾದರಿಗಳನ್ನು ಒಂದು ಬ್ಯಾಚ್ ನಲ್ಲಿ ಸೀಕ್ವೆನಿಂಗ್ ಮಾಡುವ ಸೌಲಭ್ಯವಿದೆ ಎಂದು ತಿಳಿಸಿದರು.
ಎರಡನೇ ಅಲೆ ಕಳೆದ ನಂತರ ಮೂರನೇ ಅಲೆಗಾಗಿ 243 ಕೋಟಿ ರೂ. ವೆಚ್ಚದಲ್ಲಿ, 147 ತಾಲೂಕು ಆಸ್ಪತ್ರೆಗಳಲ್ಲಿ 6,386 ಆಕ್ಸಿಜನ್ ಹಾಸಿಗೆ, 2,928 ಐಸಿಯು ಹಾಸಿಗೆಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ. 19 ಜಿಲ್ಲಾಸ್ಪತ್ರೆಗಳಲ್ಲಿ 665 ಆಕ್ಸಿಜನ್ ಹಾಸಿಗೆ, 263 ಐಸಿಯು ಹಾಸಿಗೆಗಳನ್ನು 25 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗಿದೆ. 266 ಪಿಎಸ್ಎ ಘಟಕ ರಾಜ್ಯಕ್ಕೆ ದೊರೆತಿದ್ದು, 217 ಕಾರ್ಯಾರಂಭವಾಗಿದೆ. 3,460 ವೆಂಟಿಲೇಟರ್ ಲಭ್ಯವಿದೆ. 8,100 ಆಕ್ಸಿಜನ್ ಸಾಂದ್ರಕ ಲಭ್ಯವಿದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಶೇ.30 ರಷ್ಟು ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯನ್ನು ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಮೀಸಲಿಡಲಾಗಿದೆ. ಎಲ್ಲಾ ಶಾಲೆಗಳಲ್ಲಿ 15 ದಿನಕ್ಕೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ 4.89 ಕೋಟಿ ಜನರಿಗೆ ಮೊದಲ ಡೋಸ್, 3.98 ಕೋಟಿ ಜನರು ಎರಡನೇ ಡೋಸ್ ಪಡೆದಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಒಟ್ಟು 81.5% ಮಂದಿಗೆ ಎರಡೂ ಡೋಸ್ ನೀಡಲಾಗಿದೆ ಎಂದರು.