ನವದೆಹಲಿ, ಡಿ14: ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯದ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದ್ದು, ವಾಹನ ಮಾಲೀಕರಿಗೆ ಕೊಂಚ ನೆಮ್ಮದಿ ದೊರೆತಂತಾಗಿದೆ. ಡಿ. 1ರಿಂದ ಅನ್ವಯವಾಗುವಂತೆ ದೇಶದಾದ್ಯಂತ ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಎಲ್ಲ ಟೋಲ್ ಪ್ಲಾಜಾಗಳಲ್ಲಿಯೂ ವಾಹನಗಳು ವಿದ್ಯುನ್ಮಾನ ಸುಂಕ ಪಾವತಿಗೆ ಅನುಕೂಲವಾಗುವಂತೆ ಫಾಸ್ಟ್ಯಾಗ್ ಹೊಂದುವುದನ್ನು ಕಡ್ಡಾಯಗೊಳಿಸಲಾಗಿತ್ತು.
ಬಳಿಕ ಅದನ್ನು ಡಿ. 15ಕ್ಕೆ ವಿಸ್ತರಿಸಲಾಗಿತ್ತು. ಈಗ ಆ ಗಡುವು ಅಂತ್ಯಗೊಳ್ಳುವ ಒಂದು ದಿನ ಮುಂಚೆಯಷ್ಟೇ ಒಂದು ತಿಂಗಳ ಅವಧಿವರೆಗೆ ಗಡುವನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಆರ್‌ಎಫ್‌ಐಡಿ ಸ್ಟಿಕ್ಕರ್‌ಗಳ ಪೂರೈಕೆಯ ಕೊರತೆಯಿಂದಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.