ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳ ಉತ್ತೇಜನ ಹಾಗೂ ಉದ್ಯೋಗಗಳ ಸೃಷ್ಟಿಗೆ ವಿಶೇಷ ಆಸಕ್ತಿ ತೋರಿಸಿರುವ ಸರ್ಕಾರ ಸುಮಾರು ₹ 11,513 ಕೋಟಿ ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಸೋಮವಾರ ಅನುಮೋದನೆ ನೀಡಿದೆ. ಸರ್ಕಾರದ ಈ ಮಹತ್ವದ ತೀರ್ಮಾನದಿಂದಾಗಿ ಅಂದಾಜು 46, 984 ಉದ್ಯೋಗಗಳು ಸೃಷ್ಡಿಯಾಗಲಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ನೇತೃತ್ವದಲ್ಲಿ ನಡೆದ 58 ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ ಸಭೆ ಸೋಮವಾರ ಜರುಗಿತು. ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ, ವಸತಿ ಸಚಿವ ವಿ. ಸೋಮಣ್ಣ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್ ಮತ್ತಿತರರ ಅಧಿಕಾರಿಗಳು ಭಾಗವಹಿಸಿದ್ದರು. ರಾಜ್ಯದಲ್ಲಿ ಹಲವಾರು ಬಂಡವಾಳ ಹೂಡಿಕೆ ಮಾಡುವ ಯೋಜನೆಗಳಿಗೆ ಅನುಮೋದನೆ ನೀಡುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಲಿಥಿಯಂ-ಐಯಾನ್ ಸೆಲ್ ಉತ್ಪಾದನಾ ಮಾಡುವ ಎಕ್ಸೈಡ್ ಇಂಡಸ್ಟ್ರೀಸ್ ಕಂಪನಿಯು ರಾಜ್ಯದಲ್ಲಿ 6,000 ಕೋಟಿ ರೂ ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಎಕ್ಸೈಡ್ ಇಂಡಸ್ಟ್ರೀಸ್ ಕಂಪನಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2ನೇ ಹಂತದ ಹೈಟೆಕ್, ರಕ್ಷಣೆ ಹಾಗೂ ವೈಮಾನಿಕ ಪಾರ್ಕ್ ನಿರ್ಮಿಸಲಿದ್ದು, 6,002 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದಾಗಿ ಅಂದಾಜು 1,400 ಉದ್ಯೋಗಗಳು ಸೃಷ್ಡಿಯಾಗಲಿವೆ.
ಕೆಲವು ದಿನಗಳ ಹಿಂದೆ ಎಕ್ಸೈಡ್ ಇಂಡಸ್ಟ್ರೀಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಸುಬೀರ್ ಚಕ್ರವರ್ತಿ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ವಿಶೇಷ ಆಸಕ್ತಿ ತೋರಿದ್ದರು.
ಇದೇ ರೀತಿ ಸಮಿತಿಯು ಎನ್ ಸುರ್ ರಿಲಿಯಬಲ್ ಪವರ್ ಸಲುಷನ್ಸ್ ಕಂಪನಿಯು ಕೋಲಾರ ಜಿಲ್ಲೆ ಮಾಲೂರಿನ ರಾಂಪೂರದಲ್ಲಿ ಲೀಥೀಯಂ ಐಯನ್ ಸೆಲ್ ಆರಂಭಿಸಲಿದ್ದು, 2050 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಸುಮಾರು 450 ಉದ್ಯೋಗ ಸೃಷ್ಡಿಯಾಗಲಿವೆ ಎಂದು ಸಚಿವ ಮುರುಗೇಶ್ ಆರ್ ನಿರಾಣಿ ತಿಳಿಸಿದ್ದಾರೆ.
ಮುಂಬೈ ಮೂಲದ ಜೆ.ಎಸ್ ಡಬ್ಲೂ ಎನರ್ಜಿ ಕಂಪನಿಯು ಬಳ್ಳಾರಿ ಜಿಲ್ಲೆಯ ವಿದ್ಯಾನಗರ ಪ್ರದೇಶದಲ್ಲಿ ಅಂದಾಜು 130 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ಆರಂಭಿಸಲಿದೆ. 679.51 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿದ್ದು, 65 ಉದ್ಯೋಗಗಳು ಸೃಜನೆಯಾಗಲಿವೆ.
ವೆಬ್ ವಕ್೯ ಇಂಡಿಯಾ ಪ್ರೆ.ಲಿ ಮಹಾರಾಷ್ಟ್ರ ಈ ಕಂಪನಿಯು ಬೆಂಗಳೂರಿನ ಕೆ.ಆರ್. ಪುರಂನ ಪಟ್ಟಂದೂರು ಆಗ್ರಹಾರದಲ್ಲಿ ಡಾಟಾ ಸರ್ಮಿಸ್ ಸೆಂಟರ್ ಆರಂಭಿಸಿದೆ. 530 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿದ್ದು 69 ಉದ್ಯೋಗಗಳು ಸೃಷ್ಡಿಯಾಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಮಿ. ಟೆಟ್ರಾಚ್೯ ಡೆವಲಪರ್ಸ್ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನಲ್ಲಿ ವಿವಿಧೋದ್ದೇಶ ಕೈಗಾರಿಕಾ ಪಾಕ್೯, ವೈಮಾನಿಕ, ರಕ್ಷಣೆ, ಡಾಟಾ ಸೆಂಟರ್, ಎಲೆಕ್ಟ್ರಾನಿಕ್ಸ್, ಲಾಜಿಸ್ಟಿಕ್ಸ್ , ವಸತಿ, ಮತ್ತು ಇತರೆ ಸಾಮಾಜಿಕ ಮೂಲಭೂತ ಸೌಕರ್ಯಗಳ ಚಟುವಟಿಕೆಗಾಗಿ 2,231 ಕೋಟಿ ರೂಪಾಯಿ ಬಂಡವಾಳ ಹೂಡಲಿದೆ. ಸುಮಾರು 45,000 ಉದ್ಯೋಗಗಳು ಲಭಿಸಲಿವೆ.
ಎಸಿಸಿ ಲಿ. ಕಲಬುರಗಿ ಕಂಪನಿಯು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಇಂಗಳಗಿ, ಹಳಕಟ್ಡ ಮತ್ತು ಬಸವೇಶ್ವರ ನಗರದಲ್ಲಿ ಲೈಮ್ ಸ್ಟೋನ್ ಮೈನಿಂಗ್ ನಡೆಸಲಿದೆ. 471 ಕೋಟಿ ರೂಪಾಯಿ ಬಂಡವಾಳ ಹೂಡಲಿದೆ ಎಂದು ನಿರಾಣಿ ಹೇಳಿದ್ದಾರೆ.
ಗೋದ್ರೇಜ್ ಏರೋಸ್ಪೇಸ್ ಸರ್ವಿಸ್ ಪ್ರೆ.ಲಿ. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಶೇಷ ಆರ್ಥಿಕ ವಲಯದ ಮೂಲಕ ರಕ್ಷಣೆ, ವೈಮಾನಿಕ ಪಾಕ್೯ ವಿಮಾನಗಳ ಸೀಟು ಉತ್ಪಾದನೆ ಮತ್ತಿತರ ವಸ್ತುಗಳನ್ನು ತಯಾರಿಸಲು 280 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದಾರೆ.
ಬಾಗಲಕೋಟೆ ಜೆ.ಕೆ. ಸಿಮೆಂಟ್ಸ್ ವಕ್ಸ್೯ ಕಂಪನಿಯು ಬಾಗಲಕೋಟೆ ಮುಧೋಳ ತಾಲ್ಲೂಕಿನ ಹಲ್ಕಿ ಹಾಗೂ ಮತ್ತಿತರ ಗ್ರಾಮದಲ್ಲಿ 3 ನೇ ಎಂಟಿಪಿಎ 25/30 ಮೆಗಾ ವ್ಯಾಟ್ ಸಾಮಾಥ್ಯ೯ದ ಕಲ್ಲಿದ್ದಲು ಹಾಗೂ ಉಷ್ಣ ವಿದ್ಯುತ್ ಘಟಕವ ಆರಂಭಿಸಲಿದೆ. ಸುಮಾರು 242.89 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ.
ಸಿ.ವಿ.ಪ್ರಾಜೆಕ್ಟ್ ಪ್ರೆ.ಲಿ. ಬೆಂಗಳೂರು ಬೆಂಗಳೂರು ನಗರ ಜಿಲ್ಲೆಯ ಯಲಹಯ ಹೋಬಳಿಯ ಅಮೃತಹಳ್ಳಿಯಲ್ಲಿ ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು 9 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ.
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಯಾರೇ ಬಂದರೂ ಅವರಿಗೆ ವಿದ್ಯುತ್, ರಸ್ತೆ, ನೀರು ಸೇರಿದಂತೆ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಾಲಮಿತಿಯೊಳಗೆ ಒಗದಿಸಲು ಸರ್ಕಾರ ಬದ್ದವಾಗಿದೆ ಎಂದು ನಿರಾಣಿ ಅವರು ಹೂಡಿಕೆದಾರರಿಗೆ ಅಭಯ ನೀಡಿದ್ದಾರೆ.