ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆಯಿಂದ ಕರ್ನಾಟಕ ಕಾಂಗ್ರೆಸ್ (Karnataka Congress)ನಲ್ಲಿ ಅಧಿಕಾರ ಹಂಚಿಕೆ ಕುರಿತ ಚರ್ಚೆ ಮತ್ತೆ ತೀವ್ರಗೊಂಡಿದೆ. ‘ಹೈಕಮಾಂಡ್ ಹೇಳಿದರೆ ಅಧಿಕಾರ ಬಿಟ್ಟುಕೊಡುತ್ತೇನೆ’ ಎಂಬ ಅವರ ಮಾತು ರಾಜಕೀಯ ವಲಯದಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಿದ್ದರಾಮಯ್ಯ ಅವರು ಮಾರ್ಚ್ 7ರಂದು ದಾಖಲೆಯ 17ನೇ ರಾಜ್ಯ ಬಜೆಟ್ ಮಂಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬಜೆಟ್ ಮಂಡನೆಯ ಮರುದಿನ ತವರು ಜಿಲ್ಲೆ ಮೈಸೂರು (Mysuru)ಗೆ ಭೇಟಿ ನೀಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಈ ವೇಳೆ ‘ಮುಂದಿನ ಇನ್ನೆರಡು ಬಜೆಟ್‌ಗಳನ್ನೂ ನೀವೇ ಮಂಡಿಸಲಿದ್ದೀರಾ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಹೈಕಮಾಂಡ್‌ನ ನಿರ್ಧಾರಕ್ಕೆ ಅವಲಂಬಿತವಾಗಿರುತ್ತದೆ ಎಂದು ಹೇಳಿದರು.
“ಹೈಕಮಾಂಡ್ (High Command) ಏನು ತೀರ್ಮಾನ ಮಾಡಿದರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಹೈಕಮಾಂಡ್ ಬಿಟ್ಟುಬಿಡು ಎಂದರೆ ಬಿಡುತ್ತೇನೆ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಈ ಹೇಳಿಕೆಯೊಂದಿಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತು ಮತ್ತೆ ಚರ್ಚೆ ಜೋರಾಗಿದೆ.






















































