ಬೆಂಗಳೂರು: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಭುಗಿಲೆದ್ದಿರುವ ಹಿಜಬ್ ವಿವಾದವು ಸರ್ಕಾರದ ಪಾಲಿಗೆ ಸವಾಲೆಂಬಂತಾಗಿದೆ. ಈ ವಿವಾದ ಬಗೆಹರಿಸಲು ಸರ್ಕಾರ ಹರಸಾಹಸ ವ್ಯಕ್ತಪಡಿಸುತ್ತಿದೆ.
ಈ ವಿವಾದ ಕುರಿತಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇದು ಬಹಿರಂಗ ಚರ್ಚೆ ಮಾಡುವ ವಿಚಾರವಲ್ಲ ಎಂದು ರಾಜಕೀಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ಹಿಜಬ್ ಹಾಗೂ ಕೇಸರಿ ವಸ್ತ್ರಧಾರಣೆ ವಿಚಾರವಾಗಿ ಎದ್ದಿರುವ ವಿವಾದ ಕುರಿತ ಸುದ್ದಿಗಾರರ ಪ್ರಶ್ನೆಗೆ, ‘ನಾನು ಈ ವಿಚಾರವಾಗಿ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಬೇಕಾಗಿದೆ. ಮೊದಲಿನಿಂದ ಆಚರಿಸಿಕೊಂಡು ಬಂದ ಪದ್ಧತಿ, ಸಂಸ್ಕೃತಿ, ಇತಿಹಾಸ, ಕಾನೂನು ಎಲ್ಲವನ್ನೂ ಚರ್ಚಿಸಬೇಕಾಗಿದೆ. ನಾನು ಈ ವಿಚಾರವನ್ನು ಗಮನಿಸುತ್ತಿದ್ದೇನೆ ಎಂದರು.
ನ್ಯಾಯಾಲಯ ಈಗಾಗಲೇ ಮಧ್ಯ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷನಾಗಿ ಮಾತನಾಡುವುದು ಸರಿಯಾಗುವುದಿಲ್ಲ. ಎಲ್ಲರಿಗೂ ಅವರದೇ ಆದ ಜೀವನ ಪದ್ಧತಿ, ಸಂಸ್ಕೃತಿ ಇರುವುದನ್ನು ಚರ್ಚಿಸಬೇಕಿದೆ ಎಂದರು.
ಇದು ಬಹಿರಂಗ ಚರ್ಚೆ ಮಾಡುವ ವಿಚಾರವಲ್ಲ. ಮಕ್ಕಳು, ಧಾರ್ಮಿಕ ಆಚರಣೆಯಂತಹ ಸೂಕ್ಷ್ಮ ವಿಚಾರವಿರುವುದರಿಂದ ಈ ಬಗ್ಗೆ ಒಂದು ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕಿದೆ’ ಎಂದರು.