ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಮೇಲೆ ದೃಷ್ಟಿ ಹರಿಸಿರುವ ಸುಜುಕಿ ಮೋಟಾರ್ಸ್, ತನ್ನ ಹೊಸ ಬಿಇವಿ ಪರಿಕಲ್ಪನೆ ‘ವಿಷನ್ ಇ-ಸ್ಕೈ’ ಅನ್ನು ಜಪಾನ್ ಮೊಬಿಲಿಟಿ ಶೋ 2025ರಲ್ಲಿ ಬಹಿರಂಗಪಡಿಸಿದೆ. ಮಿನಿ ಕಾರು ವಿಭಾಗದಲ್ಲಿ ಪ್ರಾಯೋಗಿಕತೆ, ಆಧುನಿಕ ವಿನ್ಯಾಸ ಮತ್ತು ವಿದ್ಯುತ್ ದಕ್ಷತೆಯ ಸಂಯೋಜನೆಯಾಗಿ ಇದು ಗಮನ ಸೆಳೆದಿದೆ.
ನಗರ ಪರ್ಯಟನೆ, ಶಾಪಿಂಗ್ ಮತ್ತು ವಾರಾಂತ್ಯದ ಸಣ್ಣ ಪ್ರಯಾಣಗಳಿಗೆ ಸೂಕ್ತವಾಗುವಂತೆ ವಿನ್ಯಾಸಗೊಳಿಸಿರುವ ಈ ಮಾದರಿಯನ್ನು “ಸರಿಯಾದ ಮಿನಿಕಾರ್” ಎಂದು ಸುಜುಕಿ ಹೇಳಿಕೊಂಡಿದೆ. 2026ರೊಳಗೆ ಮಾರುಕಟ್ಟೆಗೆ ತರಲು ಯೋಜನೆ ರೂಪಿಸಲಾಗಿದೆ.
“ವಿಶಿಷ್ಟ, ಸ್ಮಾರ್ಟ್ ಮತ್ತು ಸಕಾರಾತ್ಮಕ” ಎನ್ನುವ ವಿನ್ಯಾಸ ತತ್ವವನ್ನು ಅನುಸರಿಸಿರುವ ಇ-ಸ್ಕೈ, ಜಪಾನ್‌ನ ಕೀ-ಕಾರ್ ಶೈಲಿಯನ್ನು ಹೊಸ ರೂಪದಲ್ಲಿ ಪರಿಚಯಿಸಿದೆ. ಸಣ್ಣ ಗಾತ್ರದಲ್ಲೇ ಆಕರ್ಷಕ ನೋಟ ನೀಡುವಂತೆ ಈ ಪರಿಕಲ್ಪನೆಯನ್ನು ರೂಪಿಸಲಾಗಿದೆ.
ಒಂದೇ ಚಾರ್ಜ್‌ಗೆ 270 ಕಿಮೀ ರೇಂಜ್
ಒಂದೇ ಚಾರ್ಜ್‌ನಲ್ಲಿ 270 ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣ ಸಾಮರ್ಥ್ಯವಿರುವುದಾಗಿ ಕಂಪನಿ ಹೇಳಿದೆ. ನಗರ ಬಳಕೆದಾರರಿಗೆ ಇದೊಂದು ದೊಡ್ಡ ಕೊಡುಗೆಯಾಗಲಿದೆ. ನಗರದ ಪಾರ್ಕಿಂಗ್ ಸ್ಥಳಗಳಲ್ಲಿ ಸುಲಭ ಸಂಚಾರಕ್ಕೆ ಇದು ನೆರವಾಗಲಿದೆ.
ಕೈಗೆಟುಕುವ ಬೆಲೆಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನ ಒದಗಿಸುವ ಆಶಯದೊಂದಿಗೆ ಸುಜುಕಿ, ಇ-ಸ್ಕೈ ಮೂಲಕ ಎಲೆಕ್ಟ್ರಿಕ್ ಮಿನಿಕಾರ್ ವಿಭಾಗದಲ್ಲಿ ತನ್ನ ಪಾದಾರ್ಪಣೆಗೆ ಸಜ್ಜಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

























































