ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ನೇರ ನೇಮಕಾತಿ ಮತ್ತು ಮುಂಬಡ್ತಿ ಸಂಬಂಧಿಸಿದ ಬ್ಯಾಕ್‌ಲಾಗ್ ಹುದ್ದೆಗಳನ್ನು ಗುರುತಿಸಿ ಭರ್ತಿ ಮಾಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಈ ಸಂಬಂಧ 1978ರಿಂದ 2003ರವರೆಗೆ ರಾಜ್ಯದ ನಾಲ್ಕು ವಿಭಾಗೀಯ ಕಚೇರಿಗಳ ಸಹ ನಿರ್ದೇಶಕರಿಗೆ ಹಾಗೂ 2003ರಿಂದ ಬಳಿಕ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಿಗೆ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ನೇರ ನೇಮಕಾತಿ ಹಾಗೂ ಮುಂಬಡ್ತಿ ವಿವರಗಳನ್ನು ಆಯೋಗಕ್ಕೆ ಸಲ್ಲಿಸುವಂತೆ ಸರ್ಕಾರ ಈ ಹಿಂದೆ ಸೂಚನೆ ನೀಡಿತ್ತು.
ಆದರೆ ಶಿರಸಿ, ಉಡುಪಿ, ರಾಮನಗರ ಮತ್ತು ಬೀದರ್ ಶೈಕ್ಷಣಿಕ ಜಿಲ್ಲೆಗಳು ಮಾತ್ರ ಇದುವರೆಗೆ ಮಾಹಿತಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಉಳಿದ ಶೈಕ್ಷಣಿಕ ಜಿಲ್ಲೆಗಳು ಹಾಗೂ ನಾಲ್ಕು ವಿಭಾಗೀಯ ಕಚೇರಿಗಳಿಂದ ಇನ್ನೂ ಯಾವುದೇ ಮಾಹಿತಿ ಸಲ್ಲಿಕೆಯಾಗಿಲ್ಲ. ಈ ಕುರಿತಾಗಿ ಸುಮಾರು 10 ತಿಂಗಳು ಕಳೆದರೂ ಸ್ಪಂದನೆ ದೊರೆತಿಲ್ಲ ಎಂದು ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರಕ್ಕೆ ವರದಿ ಸಲ್ಲಿಸುವುದು ಅಗತ್ಯವಾಗಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಶೈಕ್ಷಣಿಕ ಜಿಲ್ಲೆಗಳು ಮತ್ತು ವಿಭಾಗೀಯ ಕಚೇರಿಗಳು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ನೇರ ನೇಮಕಾತಿ ವಿವರಗಳನ್ನು ಅನುಬಂಧ–1ರಲ್ಲಿ ಹಾಗೂ ಮುಂಬಡ್ತಿ ವಿವರಗಳನ್ನು ಅನುಬಂಧ–2ರಲ್ಲಿ ಸಿದ್ಧಪಡಿಸಿ, ಸಂಬಂಧಿಸಿದ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಆಯೋಗಕ್ಕೆ ನಿಯೋಜಿಸುವಂತೆ ಸರ್ಕಾರ ನಿರ್ದೇಶನ ನೀಡುವಂತೆ ಕೋರಿದೆ

























































