ಬೆಂಗಳೂರು: ರಾಜ್ಯದಲ್ಲಿ ಕಮಿಷನ್ ಪರ್ವ ಆರಂಭಾಗಿದೆ. ಲೋಕೋಪಯೋಗಿ, ಆರೋಗ್ಯ, ನೀರಾವರಿ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯಲ್ಲಿ ಕಮಿಷನ್ ಪರ್ವ ಆರಂಭವಾಗಿದೆ ಎಂದು ಕಾಂಗ್ರೆಸ್ ಧುರೀಣರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹಾಗೂ ಮಾಜಿ ಸಚಿವ ಹೆಚ್.ಎಂ ರೇವಣ್ಣ, ರಾಜ್ಯ ಸರ್ಕಾರದ ಅಕ್ರಮಗಳ ಪಟ್ಟಿಯನ್ನೇ ಮಾಧ್ಯಮದೆದುರು ತೆರೆದಿಟ್ಟರು.
ಪ್ರಧಾನ ಮಂತ್ರಿಗಳು ನಾ ಖಾವೂಂಗಾ ನಾ ಖಾನೆದೂಂಗಾ ಎಂದು ಹೇಳುತ್ತಾರೆ. ಆದರೆ ರಾಜ್ಯದಲ್ಲಿನ ಕಮಿಷನ್ ಪರ್ವ ತಡೆಯಲು ಸಾಧ್ಯವಾಗಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಬರೆದರೂ, ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರೂ ರಾಜ್ಯಸರ್ಕಾರದಿಂದ ಅಥವಾ ಕೇಂದ್ರ ಸರ್ಕಾರದಿಂದ ಕಮಿಷನ್ ಮಟ್ಟ ಹಾಕಲು ಸಾಧ್ಯವಾಗಿಲ್ಲ. ಈ ಕಮಿಷನ್ ಪರ್ವ ಈಗ ತಾರಕಕ್ಕೆ ಹೋಗಿದ್ದು, ಅದಕ್ಕೆ ಮತ್ತೊಂದು ಉದಾಹರಣೆ ರಾಯಚೂರು ಜಿಲ್ಲಾ ನಾರಾಯಣಪುರ ಆಣೆಕಟ್ಟಿನ ಬಲದಂಡೆ ಕಾಲುವೆ ಕಾಮಗಾರಿ ವಿಚಾರ ಎಂದು ವಿ.ಎಸ್.ದೂರಿದರು.
ಮೊದಲ ಪ್ಯಾಕೇಜ್ ಅನ್ನು 828.40 ಕೋಟಿ ರೂ.ಗೆ ಎನ್ ಡಿ ವಡ್ಡರ್ ಅಂಡ್ ಕಂಪನಿಗೆ ಆಗಿದೆ. ಅವರ ಸಹೋದರರು ಮಾಜಿ ಶಾಸಕರಾಗಿದ್ದು, ಹಟ್ಟಿ ಗೋಲ್ಡ್ ಮೈನ್ ಮುಖ್ಯಾಸ್ಥರಾಗಿದ್ದಾರೆ. ಇವರಿಗೆ ಎರಡನೇ ಪ್ಯಾಕೇಜ್ ನಿಗದಿಯಾಗಿದ್ದು, 16-18 ಗಾಗಿ 791 ಕೋಟಿಗೆ ನಿಗದಿಯಾಗಿದ್ದು, ಎರಡೂ ಪ್ಯಾಕೇಜ್ ನಿಂದ 1619 ಕೋಟಿ ರೂ. ಮೊತ್ತದ ಕಾಮಗಾರಿಯಲ್ಲಿ ಕಳಪೆ ಕಾಮಗಾರಿಯಾಗಿದ್ದು, ಈಗಾಗಲೇ ಮೊದಲ ಪ್ಯಾಕೇಜ್ ನಲ್ಲಿ 282 ಕೋಟಿಯಷ್ಟು ಹಾಗೂ ಎರಡನೇ ಪ್ಯಾಕೇಜ್ ನಲ್ಲಿ 143 ಕೋಟಿ ರೂ. ಪಾವತಿಯಾಗಿದೆ. ಉಳಿದ ಹಣ ಬರಬೇಕಾಗಿದೆ. ಈ ಮಧ್ಯೆ ಮುಖ್ಯ ಇಂಜಿನಿಯರ್ ಗಳು ಬದಲಾಗುತ್ತಿದ್ದು, ಈಗ ವಾಸುನಾಥ್ ಎನ್ನುವವರು ಇದ್ದಾರೆ ಎಂದವರು ಹೇಳಿದರು.
40 ಪರ್ಸೆಂಟ್ ಕಮಿಷನ್ ಪಡೆಯುವ ವಿಚಾರವಾಗಿ ಶಿವಕುಮಾರ್ ಎಂಬ ಮುಖ್ಯ ಇಂಜಿನಿಯರ್ ಹಾಗೂ ಬಿಜೆಪಿ ಸ್ಥಳೀಯ ಶಾಸಕ ಶಿವನಗೌಡ ಅವರ ಮಧ್ಯೆ ದೂರವಾಣಿ ಸಂಭಾಷಣೆ ನಡೆದಿದ್ದು, ಶಾಸಕರು ಅಧಿಕಾರಿಗೆ ಅತ್ಯಂತ ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿದಿದ್ದಾರೆ. ಈ ಸಂಭಾಷಣೆಯಲ್ಲಿ ನೀನು 200 ಕೋಟಿ ರೂ. ನಕಲಿ ಬಿಲ್ ಕೊಟ್ಟಿದ್ದೀಯಾ ಎಂದು ಹಾಗೂ ನನ್ನನ್ನು ಕೇಳದೇ ಬಿಲ್ ಯಾಕೆ ಬರೆದೆ ಎಂಬ ವಿಚಾರಗಳು ಪ್ರಸ್ತಾಪವಾಗಿವೆ ಎಂದವರು ಹೇಳಿದರು.
ಸ್ಥಳೀಯ ಶಾಸಕರೇ 200 ಕೋಟಿ ರೂ.ನಷ್ಟು ನಕಲಿ ಬಿಲ್ ಎಂದಿದ್ದು, ಈ ನಕಲಿ ಬಿಲ್ ಗೆ ಸರ್ಕಾರ 200 ಕೋಟಿ ಪಾವತಿ ಮಾಡಿದೆ ಎಂದಾದರೆ ಆವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕು. ಇನ್ನು ನನ್ನನ್ನು ಕೇಳಿ ಯಾಕೆ ಬಿಲ್ ಬರೆಯಲಿಲ್ಲ ಎಂದು ಹೇಳಿದ್ದಾರೆ. ಇದುವರೆಗೂ ನಮ್ಮ ರಾಜಕೀಯ ಜೀವನದಲ್ಲಿ ಶಾಸಕರನ್ನು ಕೇಳಿ ಬಿಲ್ ಬರೆಯುವ ವ್ಯವಸ್ಥೆ ಇದೇ ಮೊದಲು ಕೇಳಿದ್ದೇನೆ ಎಂದ ಉಗ್ರಪ್ಪ, ಎರಡೂ ಪ್ಯಾಕೇಜ್ ನಿಂದ ಈಗಾಗಲೇ 425 ಕೋಟಿ ಬಿಲ್ ಪಾವತಿಯಾಗಿದ್ದು, ಈ ಆಡಿಯೋ ಸಂಭಾಷಣೆ ಕೇಳಿದ ನಂತರ ರಾಜ್ಯದಲ್ಲಿ ಸರ್ಕಾರ ಜೀವಂತವಾಗಿದ್ದರೆ ಈ ವಿಚಾರವಾಗಿ ತನಿಖೆ ಮಾಡಲು ಮುಂದಾಗಬೇಕಿತ್ತು. ಇದೆಲ್ಲವನ್ನು ನೋಡಿದರೆ ನಕಲಿ ಬಿಲ್ ಪಾವತಿ ಮಾಡಿ ಕಮಿಷನ್ ಪಡೆಯುವ ಸರ್ಕಾರ ಇದಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಾಗಲಿ, ಮಂತ್ರಿಗಳಾಗಲಿ, ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಾಗಲಿ ಬಾಯಿ ಬಿಡುತ್ತಿಲ್ಲ. ಈ ಅಕ್ರಮದಲ್ಲಿ ಕಿರಿಯ ಇಂಜಿನಿಯರ್ ನಿಂದ ಹಿಡಿದು ವಿಧಾನಸೌಧದ ಮೂರನೇ ಮಹಡಿಯವರೆಗೂ ಪ್ರತಿಯೊಬ್ಬರಿಗೂ ಪಾಲು ಹೋಗುತ್ತಿರಬಹುದು ಎಂದು ಭಾವಿಸುತ್ತೇನೆ ಎಂದರು.
40 ಪರ್ಸೆಂಟ್ ಕಮಿಷನ್ ಪರ್ವ ಆರಂಭವಾಗಿರುವ ಸಂದರ್ಭದಲ್ಲಿ ಇಷ್ಟೇಲ್ಲಾ ಅಕ್ರಮ ನಡೆಯುತ್ತಿದ್ದರೂ ಸರ್ಕಾರ ಮೌನಿ ಬಾಬಾ ಆಗಿದೆ. ಇನ್ನು ಕೇಂದ್ರ ಸರ್ಕಾರವೂ ಕೂಡ ಯಾವುದೇ ರೀತಿ ಕ್ರಮ ಕೈಗೊಳ್ಳುತ್ತಿಲ್ಲ ಎಂದ ಅವರು, ಐಪಿಸಿ ಪ್ರಕಾರ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಪ್ರಕಾರ ಇದು ಅಪರಾಧವಾಗಿದ್ದು, ಒಂದೆಡೆ ನೌಕರನ ಮೇಲೆ ದಾಳಿ ಹಾಗೂ ಮತ್ತೊಂದು ಕಡೆ ನೌಕರ ನಕಲಿ ಬಿಲ್ ಸೃಷ್ಟಿಸಿರುವ ಅಪರಾಧ. ಈ ಮೂಲಕ ರಾಜ್ಯದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿಯುತ್ತಿದ್ದು, ಕೂಡಲೇ ಈ ವಿಚಾರವಾಗಿ ಕೇಸ್ ದಾಖಲಿಸಬೇಕು. ಇದರ ತನಿಖೆಯನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ಮಾಡಬೇಕು. ಈ ಸರ್ಕಾರಕ್ಕೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಬದ್ಧತೆ ಇದ್ದರೆ ಪ್ರಕರಣದ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಆಡಿಯೋದಲ್ಲಿ ಮಾತನಾಡಿರುವುದು ನಾನೇ ಎಂದು ಶಾಸಕರು ಮಾಧ್ಯಮವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ಅವರು ಕೆಆರ್ ಡಿಸಿಎಲ್ ಅಧ್ಯಕ್ಷರಾಗಿದ್ದು, ಸಂಪುಟ ದರ್ಜೆಯಲ್ಲಿದ್ದಾರೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಚಂದ್ರಪ್ಪ, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಸಹ ಸಂಚಾಲಕರಾದ ರಾಮಚಂದ್ರಪ್ಪ, ಸುರೇಶ್ ನಾಯ್ಕ್ ದೇವದುರ್ಗ ಅವರು ಇದ್ದರು.