ಜೈಪುರ: ಚುನಾವಣಾ ರಣಾಂಗಣದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ದೇಶದ ಸಂವಿಧಾನ ಬದಲಾವಣೆಗೆ ಸಂಚು, ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪಕ್ಷದ ಚುನಾವಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಘನತೆ ಮತ್ತು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದವು. ವಿಪಕ್ಷಗಳ ನಾಯಕರನ್ನು ಬಿಜೆಪಿಗೆ ಸೇರುವಂತೆ ಒತ್ತಾಯಿಸಲು ವಿವಿಧ ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ ಸೋನಿಯಾ ಗಾಂಧಿ, ದೇಶದಲ್ಲಿ ಸರ್ವಾಧಿಕಾರದ ಆಡಳಿತ ಇದ್ದು, ಇದಕ್ಕೆ ನಾವೆಲ್ಲರೂ ಸೂಕ್ತ ಉತ್ತರ ನೀಡುತ್ತೇವೆ ಎಂದರು.
ತಾವೇ ಶ್ರೇಷ್ಠ ಎಂದು ಪರಿಗಣಿಸಿರುವ ನರೇಂದ್ರ ಮೋದಿ ದೇಶದ ಘನತೆ ಮತ್ತು ಪ್ರಜಾಪ್ರಭುತ್ವದ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದ ಸೋನಿಯಾ ಗಾಂಧಿ, ಕಳೆದ 10 ವರ್ಷಗಳಿಂದ ನಿರುದ್ಯೋಗ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು ಮತ್ತು ಅಸಮಾನತೆಯನ್ನೆ ಮೋದಿ ಸರ್ಕಾರ ಪ್ರೋತ್ಸಾಹಿಸುತ್ತಾ ಬಂದಿದೆ ಎಂದು ಬಣ್ಣಿಸಿದರು.