ತುಮಕೂರು: ತನ್ನ ತಂದೆತಾಯಿ ಇಬ್ಬರೂ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಅವರ ನಿಧನದ ನಂತರ ಸರ್ಕಾರದಿಂದ ತಿಂಗಳಿಗೆ 3500 ಸಾವಿರ ಧನಸಹಾಯ ಸಿಗುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ನಾನು ಉತ್ತಮ ರೀತಿ ವಿದ್ಯಾಭ್ಯಾಸ ಮಾಡಿ ವೈದ್ಯನಾಗಬೇಕು ಅಂದುಕೊಂಡಿದ್ದೇನೆ.
ಇವು ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರಿನಲ್ಲಿ ಇಂದು ಆಯೋಜಿಸಿದ್ದ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ, ಉಚಿತ ಪಠ್ಯಪುಸ್ತಕ ವಿತರಣೆ ಹಾಗೂ ಕಲಿಕಾ ಚೇತರಿಕೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಹೊಸ ಕೆರೆಯ ಜೀವನ್ ಜೈ ಹಿಂದ್ ಶಾಲೆಯ ಕುಮಾರಿ ಚೈತನ್ಯ ಅವರ ಮನಮಿಡಿಯುವ ಮಾತುಗಳು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಸರ್ಕಾರ ರೈತರ ಮಕ್ಕಳಿಗೂ ವಿದ್ಯಾರ್ಥಿವೇತನ ನೀಡುತ್ತಿದೆ. ಕೋವಿಡ್ ನಿಂದ ಮೃತಪಟ್ಟವರ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ಜಾರಿಗೊಳಿಸಿದೆ. ಅಷ್ಟೇ ಅಲ್ಲದೆ, ಪ್ರತಿ ತಿಂಗಳೂ 3500 ರೂ.ಗಳ ಸಹಾಯಧನ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಪೂರ್ಣವಾಗಿ ನೆರವು ನೀಡುತ್ತದೆ. ಧೈರ್ಯವಾಗಿ ಓದು , ನೀನು ಯಶಸ್ವಿಯಾಗುವೆ. ನಿನ್ನಿಂದ ಹಲವಾರು ಜನರಿಗೆ ಒಳ್ಳೆಯದಾಗುತ್ತದೆ. ಆತ್ಮಸ್ಥೆರ್ಯದಿಂದ ಮುಂದುವರೆಯಬೇಕು ಎಂದು ಧೈರ್ಯ ಹೇಳಿದರು.
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಕ್ರೀಡಾ ಸಾಮಾಗ್ರಿಗಳನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಕಳೆದ ವರ್ಷ 5 ಕೋಟಿ ರೂ.ಗಳನ್ನು ಇದಕ್ಕಾಗಿ ವ್ಯಯಿಸಲಾಗಿದೆ. ಈ ವರ್ಷ 10 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು ಎಂದರು.
ತೊಂಡಗೆರೆ ಸರ್ಕಾರಿ ಪ್ರೌಢಶಾಲೆಯ ರಾಕೇಶ್ ಪೌಷ್ಟಿಕ ಆಹಾರ ಒದಗಿಸಲು ಇಟ್ಟ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಪೌಷ್ಟಿಕ ಆಹಾರ ಒದಗಿಸುವ ಅಕ್ಷರ ದಾಸೋಹ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಮಕ್ಕಳಿಗೆ ಪೌಷ್ಟಿಕಾಂಶ ಬಹಳ ಮುಖ್ಯ. ಪೌಷ್ಟಿಕಾಂಶ ಇದ್ದರೆ ಮಾತ್ರ ಬೆಳವಣಿಗೆಯಾಗುತ್ತದೆ ಮತ್ತು ವಿದ್ಯಾಭ್ಯಾಸವನ್ನು ಚೆನ್ನಾಗಿ ಮಾಡಬಹುದು. ಈ ವರ್ಷ ಬಜೆಟ್‍ನಲ್ಲಿ ಪೌಷ್ಟಿಕಾಂಶ ಕೊರತೆ ಇರುವ ಮಕ್ಕಳಿಗೆ ನೀಡುವ ಆಹಾರವನ್ನು ಸಾಮಾನ್ಯ ಕೊರತೆ ಇದ್ದವರಿಗೂ ನೀಡಬೇಕೆಂದು ತೀರ್ಮಾನಿಸಲಾಗಿದೆ. ಇನ್ನೂ ಹೆಚ್ಚು ಮಾಡಲು ವಿಶೇಷ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಬೆಳ್ಳಾವಿ ಸರ್ಕಾರಿ ಪಬ್ಲಿಕ್ ಪ್ರೌಢಶಾಲೆಯ ಅಮೂಲ್ಯ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಎಂ, ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಿಯಾಗಿ ಶಾಲೆಗಳು ತೆರೆದಿರಲಿಲ್ಲ. ಈ ವರ್ಷ ಶಾಲೆಗಳು ಪ್ರಾರಂಭವಾಗಿವೆ. ನಿಯಮಿತವಾಗಿ ಶಾಲೆಗೆ ಬನ್ನಿ ಖಂಡಿತವಾಗಿ ಸೈಕಲ್ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ಇತ್ತರು.
ಚಿಕ್ಕನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಬಸವರಾಜ ಬೊಮ್ಮಾಯಿ, ಈ ವರ್ಷ ವಿಶೇಷವಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸುಮಾರು 1000 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಸುಮಾರು 6500 ಕ್ಕೂ ಹೆಚ್ಚು ಕೊಠಡಿಗಳನ್ನು ಈ ವರ್ಷ ನಿರ್ಮಾಣ ಮಾಡಲಾಗುವುದು. ಈ ಪೈಕಿ ಚಿಕ್ಕನಹಳ್ಳಿ ಶಾಲೆಗೆ 2 ಕೊಠಡಿಗಳನ್ನು ನಿರ್ಮಿಸಲು ಆದೇಶ ನೀಡಲಾಗುವುದು ಎಂದರು. ಕರ್ನಾಟಕ ರಾಜ್ಯವಾದ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಶಾಲಾ ಕೊಠಡಿಗಳ ನಿರ್ಮಾಣವಾಗಿರಲಿಲ್ಲ. ಇದೊಂದು ವಿಶೇಷ ಕಾರ್ಯಕ್ರಮ. ಇದಾದರೆ, ಕೊಠಡಿಗಳು ಸೋರುವುದು, ಮುಂತಾದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಶಿಕ್ಷಣ ಇಲಾಖೆ ಚುರಕಾಗಿ ಎಲ್ಲೆಲ್ಲಿ ಶಾಲೆಗಳು ಸೋರುತ್ತಿವೆ ಎಂಬ ವರದಿಯನು ಸಲ್ಲಿಸಿದರೆ ಆದಷ್ಟೂ ಬೇಗನೆ ಕೊಠಡಿ ನಿರ್ಮಾಣ ಪ್ರಾರಂಭಿಸಲಾಗುವುದು. ಈ ವರ್ಷದ ಅಂತ್ಯದೊಳಗೆ ನಿರ್ಮಾಣ ಪೂರ್ಣಗೊಳ್ಳಬೇಕೆನ್ನುವುದು ನನ್ನ ಇಂಗಿತ ಎಂದರು.