ಬೆಂಗಳೂರು: ರಾಜ್ಯ ಸರ್ಕಾರ ರಾಜ್ಯಪಾಲರ ಬಾಯಿಂದ ಸಾಕಷ್ಟು ಸುಳ್ಳುಗಳನ್ನು ಹೇಳಿಸಿದೆ. ರಾಜ್ಯಪಾಲರ ಎಲ್ಲ ಅಧಿಕಾರಗಳನ್ನು ಕಿತ್ತುಕೊಂಡು ಅವರನ್ನೇ ಬಳಸಿಕೊಂಡು ಸರ್ಕಾರವನ್ನು ಶ್ಲಾಘಿಸಿಕೊಳ್ಳಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಬಾಯಿಂದ ಸುಳ್ಳಿನ ಸರಮಾಲೆಯನ್ನೇ ಹೇಳಿಸಲಾಗಿದೆ. ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷವನ್ನು ತರಲಾಗಿದೆ. ರಾಜ್ಯಪಾಲರ ಅಧಿಕಾರಗಳನ್ನು ಕಿತ್ತುಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿರುವ ಅವಮಾನ. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ʼಇವ ನಮ್ಮವʼ ಎಂಬ ಬಸವಣ್ಣನವರ ವಚನ ಹೇಳುತ್ತಾರೆ. ಆದರೆ ರಾಜ್ಯಪಾಲರ ವಿಚಾರ ಬಂದಾಗ ಮಾತ್ರ ಇವರು ನಮ್ಮವರಲ್ಲ ಎಂದು ಭೇದ ತೋರುತ್ತಾರೆ. ರಾಜ್ಯಪಾಲರು ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾನೂನು ತಿದ್ದುಪಡಿಯನ್ನು ವಾಪಸ್ ಕಳುಹಿಸಿದ್ದರು. ಅದನ್ನು ವಿವೇಚನೆ ಮಾಡದೆ ಸರ್ಕಾರದಿಂದ ದ್ವೇಷ ಸಾಧಿಸಲಾಗುತ್ತಿದೆ. ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರು ಬಾಂಗ್ಲಾ ಪ್ರಧಾನಿಯೇ ಗತಿಯೇ ಬರಲಿದೆ ಎಂದು ಬೆದರಿಕೆ ಹಾಕಿದ್ದರು. ರಾಜ್ಯಪಾಲರಿಗೆ ತಿಳಿವಳಿಕೆ ಇಲ್ಲವೆಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದರು ಎಂದು ದೂರಿದರು.
ಆಡಳಿತದಲ್ಲಿ ಪಾರದರ್ಶಕತೆ ತಂದಿದ್ದರೆ, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹೇಗೆ ಲೂಟಿಯಾಯಿತು? ಪಿಎಸ್‌ಐ ಪರಶುರಾಮ್ ಹೇಗೆ ಸತ್ತರು? ಅಬಕಾರಿ ಇಲಾಖೆಯಲ್ಲಿ ಹಗರಣ ಹೇಗೆ ನಡೆಯಿತು? ಆಕ್ಸ್‌ಫರ್ಡ್ ಬ್ಲಾಗ್‌ನಲ್ಲಿ ಆರ್ಥಿಕ ತಜ್ಞರೊಬ್ಬರು ಸರ್ಕಾರವನ್ನು ಶ್ಲಾಘಿಸಿ ಶೈನಿಂಗ್ ಲೈಟ್ ಇನ್ ದಿ ಡಾರ್ಕ್‌ನೆಸ್ ಎಂದು ಬರೆದಿದ್ದಾರೆ ಎಂದು ಭಾಷಣದಲ್ಲಿ ಉಲ್ಲೇಖಿಸಲಾಗಿದೆ. ಇದು ಯಾರೆಂದು ಹುಡುಕಿದರೆ, ಇವರು ಮುಖ್ಯಮಂತ್ರಿ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಎಂದು ತಿಳಿಯಿತು. ಕಾಂಗ್ರೆಸ್ ನಾಯಕರ ಕಚೇರಿಯಲ್ಲೇ ಸಂಬಳಕ್ಕಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಬರೆದಿರುವುದನ್ನು ಬಜೆಟ್ ಭಾಷಣದಲ್ಲಿ ಏಕೆ ಉಲ್ಲೇಖಿಸಬೇಕು? ಇದನ್ನು ಬಿರುದು ಎಂದು ಪರಿಗಣಿಸಬೇಕೆ? ಇದನ್ನು ರಾಜ್ಯಪಾಲರ ಬಾಯಿಂದ ಹೇಳಿಸಬೇಕೆ? ರಾಷ್ಟ್ರಪತಿಯವರಿಂದ ಬಿರುದು ಪಡೆಯಬೇಕೆ ಹೊರತು, ಸಿಎಂ ಕಚೇರಿಯಲ್ಲಿ ಕೆಲಸ ಮಾಡುವವರಿಂದ ಬಿರುದು ಪಡೆಯಬಾರದು ಎಂದು ಹೇಳಿದರು.
9 ವಿಶ್ವವಿದ್ಯಾಲಯಗಳನ್ನು ರದ್ದು ಮಾಡಲು ಡಿ.ಕೆ.ಶಿವಕುಮಾರ್ ನೇತೃತ್ವದ ಸಮಿತಿ ನಿರ್ಧರಿಸಿದೆ. ಬಿಜೆಪಿ ಸರ್ಕಾರ ಸುಮ್ಮಸುಮ್ಮನೆ ವಿವಿಗಳನ್ನು ಮಂಜೂರು ಮಾಡಿಲ್ಲ. ದಕ್ಷಿಣ ಕನ್ನಡದಲ್ಲಿ 65.58%, ಬಾಗಲಕೋಟೆಯಲ್ಲಿ 25%, ಚಾಮರಾಜನಗರದಲ್ಲಿ 10%, ಮಂಡ್ಯದಲ್ಲಿ 20%, ಕೊಡಗಿನಲ್ಲಿ 16%, ಹಾಸನದಲ್ಲಿ 15%, ಹಾವೇರಿಯಲ್ಲಿ 45%, ಕೊಪ್ಪಳದಲ್ಲಿ 16% ಸಾಕ್ಷರತೆ ಇದೆ. ಕಡಿಮೆ ಸಾಕ್ಷರತೆ ಇರುವ ಜಿಲ್ಲೆಗಳಲ್ಲಿ ಅವಕಾಶ ವಂಚಿತರಿಗೆ ಅವಕಾಶ ನೀಡಲು ವಿವಿಗಳನ್ನು ನೀಡಲಾಗಿತ್ತು. ವಿವಿಗಳಿಗೆ ಒಟ್ಟಾರೆಯಾಗಿ 450 ಕೋಟಿ ರೂ. ಬೇಕು ಎಂದರು.
ಮಂಡ್ಯ ವಿಶ್ವವಿದ್ಯಾಲಯವಾಗಲು ಅಂಬರೀಶ್ ಅವರ ಪ್ರಯತ್ನ ದೊಡ್ಡದಿದೆ. ಯುವಕರು ಬೇರೆ ಜಿಲ್ಲೆಗಳಿಗೆ ಪ್ರಯಾಣ ಮಾಡಬಹುದು. ಆದರೆ ಹೆಣ್ಣುಮಕ್ಕಳು ದೂರ ಹೋಗುವುದು ಕಷ್ಟ ಎಂಬ ಕಾರಣಕ್ಕೆ ಮನೆಯಲ್ಲೇ ಉಳಿದು ಸಾಕ್ಷರತೆ ಪ್ರಮಾಣ ಇಳಿಕೆಯಾಗುತ್ತದೆ. ಯುಜಿಸಿ ಕೂಡ ಪ್ರತಿ ಜಿಲ್ಲೆಗೆ ಒಂದು ವಿವಿ ಬೇಕು ಎಂದು ಹೇಳಿದೆ. ಅಮೆರಿಕದಲ್ಲಿ 60 ಸಾವಿರ ಜನರಿಗೆ ಒಂದು ವಿವಿ ಇದ್ದರೆ, ನಮ್ಮಲ್ಲಿ 1.18 ಲಕ್ಷ ಜನರಿಗೆ ಒಂದು ವಿವಿ ಇದೆ. ವಿವಿಗಳನ್ನು ಮುಚ್ಚಿದರೆ ಅಲ್ಲಿ ಕೆಲಸ ಮಾಡುವವರಿಗೆ ಸಮಸ್ಯೆಯಾಗುತ್ತದೆ. ತಾಲೂಕುಗಳನ್ನು ಹೆಚ್ಚಿಸಿ ಎಂದು ಇದೇ ಕಾಂಗ್ರೆಸ್ ನಾಯಕರು ಈ ಹಿಂದೆ ಒತ್ತಾಯ ಮಾಡುತ್ತಿದ್ದರು. ಆದರೆ ಶಿಕ್ಷಣದ ವಿಚಾರದಲ್ಲಿ ಮಾತ್ರ ಈ ಮನೋಭಾವ ಇಲ್ಲ. ಬಾರ್‌ಗಳನ್ನು ಹೆಚ್ಚಿಸಬೇಕೋ, ವಿವಿಗಳನ್ನು ಹೆಚ್ಚಿಬೇಕೋ ಎಂದು ಇವರೇ ತೀರ್ಮಾನಿಸಲಿ ಎಂದರು.