ಬೆಂಗಳೂರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಪೊಲೀಸರು ಬಙಧಿಸಿರು ನಡೆ ಕಾನೂನು ಬಾಹಿರ ಎಂದಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ, ಪೊಲೀಸರ ಕ್ರಮದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸಿ.ಟಿ.ರವಿ ಅವರನ್ನು ಪೊಲೀಸರು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋದರು. ಸೇಫ್ಟಿ ದೃಷ್ಟಿಯಿಂದ ಕೆಲವರು ಕಾಡು, ಕ್ವಾರಿಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ. ಪೊಲೀಸರು ಹೊಸ ಸೇಫ್ಟಿ ಮಾರ್ಗ ಹುಡುಕಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರನ್ನು ಸುರಕ್ಷತೆ ದೃಷ್ಟಿಯಿಂದ ಕಬ್ಬಿನ ಗದ್ದೆಗೆ ಅಥವಾ ಕ್ವಾರಿಗೆ ಕರೆದುಕೊಂಡು ಹೋಗಿ ಬಿಡುವುದು ಉತ್ತಮ ಎಂದು ವ್ಯಂಗ್ಯವಾಡಿದರು.
ಒಬ್ಬ ವಿಧಾನಪರಿಷತ್ ಸದಸ್ಯನಿಗೆ ಸುರಕ್ಷತೆ ಕೊಡಲು ಸಾಧ್ಯವಾಗದ ಸರ್ಕಾರ, ಅಪರಾಧಿಗಳಿಂದ ಜನರನ್ನು ಹೇಗೆ ಕಾಪಾಡುತ್ತದೆ? ಸಿ.ಟಿ.ರವಿ ನಕ್ಸಲ್ ಪ್ರದೇಶದಿಂದ ಬಂದವರು. ಅವರಿಗೆ ಮೊದಲೇ ನಕ್ಸಲರಿಂದ ಪ್ರಾಣ ಬೆದರಿಕೆ ಇದ್ದು, ಅಂತಹವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿದ್ದಾರೆ. ಅವರಿಗೆ ನಕ್ಸಲರು ಗುಂಡು ಹೊಡೆಯಲಿ ಎಂಬ ಕಾರಣಕ್ಕೆ ಅಲ್ಲಿಗೆ ಕರೆದುಕೊಂಡು ಹೋದರೇ? ಈ ಪ್ರಕರಣವನ್ನು ಸದನದ ಒಳಗೆ ಬಗೆಹರಿಸಬೇಕಿತ್ತು. ಅದನ್ನು ಬಿಟ್ಟು ಎಲ್ಲೋ ಪ್ರಕರಣ ದಾಖಲಿಸಿ ರಾತ್ರಿಯೆಲ್ಲಾ ಬಸ್‌ನಲ್ಲಿ ಸುತ್ತಾಡಿಸಲಾಗಿದೆ. ಹೀಗೆ ಬಂಧಿಸಿದ ಪೊಲೀಸ್ ಅಧಿಕಾರಿ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ. ಬಂಧನ ಬಳಿಕ ಪೊಲೀಸ್ ಅಧಿಕಾರಿಗಳು ಫೋನ್‌ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದರು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.