ಬೆಂಗಳೂರು: ಅನ್ವರ್ ಮಾಣಿಪ್ಪಾಡಿ ಸಮಿತಿಯ ವರದಿಯ ಆಧಾರದ ಮೇಲೆ ವಕ್ಫ್ ಜಮೀನು ಕಬಳಿಸಿದವರಿಗೆ ಬಿಜೆಪಿ ಸರ್ಕಾರ ನೋಟಿಸ್ ನೀಡಿತ್ತು. ಒಂದು ವೇಳೆ ತಪ್ಪಾಗಿ ರೈತರಿಗೆ ನೋಟಿಸ್ ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಈಗಿನ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಅನ್ವರ್ ಮಾಣಿಪ್ಪಾಡಿ ನೇತೃತ್ವದಲ್ಲಿ ಸಮಿತಿ ರಚಿಸಿ, ವಕ್ಫ್ ಭೂ ಕಬಳಿಕೆಯ ವರದಿ ರೂಪಿಸಿತ್ತು. ಆದರೆ ಈಗ ಇದರಲ್ಲಿ ಅವ್ಯವಹಾರ ಆಗಿದೆ ಎಂದು ಹೇಳಲು ಕೂಡ ಕಾಂಗ್ರೆಸ್ ಕೂಡ ತಯಾರಿಲ್ಲ. ಕಾಂಗ್ರೆಸ್ ನಾಯಕರು ಲಕ್ಷಾಂತರ ಎಕರೆ ವಕ್ಫ್ ಜಾಗವನ್ನು ಕಬಳಿಸಿ ಮಾರಾಟ ಮಾಡಿರುವುದು ಈ ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿತ್ತು. ಆ ಪ್ರಕ್ರಿಯೆಯಲ್ಲಿ ಬಿಜೆಪಿ ಸರ್ಕಾರ ನೋಟಿಸ್ ನೀಡಿದೆ. ಒಂದು ವೇಳೆ ತಪ್ಪಾಗಿ ನೋಟಿಸ್ ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಈಗಿನ ಸರ್ಕಾರ ಕಠಿಣ ಕ್ರಮ ವಹಿಸಲಿ ಎಂದರು.
ಈಗ ವಕ್ಫ್ ಮಂಡಳಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲು ಮುಂದಾಗಿದೆ. ಬಡ ರೈತರಿಗೆ ನೋಟಿಸ್ ನೀಡುವುದು ಸರಿಯಲ್ಲ. ಆಗಲೂ ರೈತರಿಗೆ ನೋಟಿಸ್ ನೀಡಿದ್ದರೆ ಆ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲಿ. ನಾವು ಯಾವುದೇ ಅಧಿಕಾರಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಡಾ ಹಗರಣ ಈ ರಾಜ್ಯ ಕಂಡ ಅತಿ ದೊಡ್ಡ ಹಗರಣ. ಇದು ಕೇವಲ 14 ಸೈಟುಗಳಲ್ಲದೆ, ಬಡವರಿಗೆ ಸೇರಬೇಕಾದ ನೂರಾರು ಸೈಟುಗಳು ಬೇರೆಯವರ ಪಾಲಾಗಿದೆ. ಇದರ ತನಿಖೆ ಎಂದಾಕ್ಷಣ ಹಿರಿಯ ಅಧಿಕಾರಿಗಳು ದಾಖಲೆಗಳನ್ನು ಸಹಜವಾಗಿಯೇ ತಿದ್ದಿರುತ್ತಾರೆ. ಹೀಗಾಗಿ ಇದನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದೇವೆ. ಇದರಿಂದ ಬಡವರಿಗೆ ನ್ಯಾಯ ದೊರೆತು, ಸರ್ಕಾರದ ಖಜಾನೆಗೆ ನ್ಯಾಯಯುತವಾಗಿ ಆದಾಯ ಬರಲಿದೆ. ಸಚಿವ ಭೈರತಿ ಸುರೇಶ್ ಎಷ್ಟು ದಾಖಲೆಗಳನ್ನು ಎತ್ತಿಕೊಂಡು ಹೋಗಿದ್ದಾರೋ ಗೊತ್ತಿಲ್ಲ. ಅದಕ್ಕೆ ಮುನ್ನವೇ ಐಐಎಸ್ ಅಧಿಕಾರಿಗಳು ದಾಖಲೆ ಕದಿಯುವ ಹಂತಕ್ಕೆ ತಲುಪಿದ್ದಾರೆ. ರಾಜ್ಯದ ಆಡಳಿತ ವ್ಯವಸ್ಥೆ ಕುಸಿದಿದೆ ಎಂಬುದು ಇದಕ್ಕೆ ಸಾಕ್ಷಿ ಎಂದರು.