ಬೆಂಗಳೂರು; ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿರುವ ಸಿಎಂ ಸಿದ್ದರಾಮಯ್ಯ, ದಲಿತರ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಡ್ಯದಲ್ಲಿ ಕಾವೇರಿಗೆ ಬಾಗಿನಸಮರ್ಪಿಸಿದ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎಸ್.ಸಿ.ಎಸ್.ಪಿ/ ಟಿಎಸ್ಪಿ ಯೋಜನೆ ನಮ್ಮ ಸರ್ಕಾರ ಬಿಟ್ಟರೆ ಬಿಜೆಪಿ ಆಡಳಿತವಿರುವ ಬೇರೆ ಯಾವ ರಾಜ್ಯಗಳಲ್ಲಿದೆ ಎಂದು ರಾಜ್ಯದ ಬಿಜೆಪಿ ನಾಯಕರಾದ ಆರ್. ಅಶೋಕ್, ವಿಜಯೇಂದ್ರ ಅವರನ್ನು ಕೇಳಬಯಸುತ್ತೇನೆ ಎಂದರು. ಎಸ್.ಸಿ.ಎಸ್.ಪಿ/ ಟಿಎಸ್ಪಿ ಕಾಯ್ದೆಯಡಿ 24% ದಲಿತರಿಗೆ 39,121 ಕೋಟಿಯನ್ನು ರಾಜ್ಯ ಸರ್ಕಾರ ವೆಚ್ಚ ಮಾಡುತ್ತಿದೆ. ಕೇಂದ್ರ ಸರ್ಕಾರ 48 ಲಕ್ಷ ಕೋಟಿ ಬಜೆಟ್ ನಲ್ಲಿ 65 ಸಾವಿರ ಕೋಟಿ ರೂ.ಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಮೀಸಲಿಟ್ಟದಿದ್ದಾರೆ. ದಲಿತರ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಬಿಜೆಪಿಗೆ ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು.
ಸಾಮಾಜಿಕ ನ್ಯಾಯದ ವಿರುದ್ಧವಾಗಿರುವ ಬಿಜೆಪಿ, ಸಮ ಸಮಾಜ ಆಗಬಾರದು ಎಂದು ನಂಬಿದೆ ಎಂದರು. ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಅವರ ವಿಚಾರಗಳಿಗೆ ವಿರುದ್ಧವಾಗಿರುವ ಬಿಜೆಪಿಯಿಂದ ನಾವು ಪಾಠ ಕಲಿಯಬೇಕಾದ ಅಗತ್ಯವಿಲ್ಲ. ಈ ರಾಜ್ಯದ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಎಲ್ಲಾ ಜಾತಿ, ಧರ್ಮದ ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಪ್ರಯತ್ನವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಮಾಡುತ್ತಿದೆ ಎಂದರು.
ಸುಳ್ಳನ್ನು ನೂರು ಸಾರಿ ಹೇಳಿ ಸತ್ಯ ಮಾಡಬೇಕೆಂಬ ಉದ್ದೇಶ ಇವರದ್ದು. ನಾವೆಷ್ಟೇ ಪರಿಹಾರ ನೀಡುವ ಪ್ರಯತ್ನ ಮಾಡಿದರೂ ಕೂಡ ಮಳೆ ಬಂದು ಬೆಳೆ ಬೆಳೆದಾಗ ಮಾತ್ರ ಸಮೃದ್ಧಿಯಾಗಲು ಸಾಧ್ಯ. ಬಿಜೆಪಿ, ಜೆಡಿಎಸ್ ಮಾತುಗಳನ್ನು ಕೇಳಿ ನಮ್ಮ ಮೇಲೆ ಅನುಮಾನ ಪಟ್ಟುಕೊಳ್ಳುವ ಕೆಲಸವನ್ನು ಮಾಡಬೇಡಿ ಎಂದರು. ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಅವರದ್ದು. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ 121 ಇಡಿ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 115 ಪ್ರಕರಣಗಳು ವಿರೋಧ ಪಕ್ಷದವರ ಮೇಲೆ ಹಾಕಿದ್ದಾರೆ. ವಿರೋಧ ಪಕ್ಷದವರನ್ನು ದುರ್ಬಲಗೊಳಿಸಿ, ಶಕ್ತಿಗುಂದಿಸಿ ಅಧಿಕಾರ ಮಾಡುವುದು, ಜೈಲಿಗೆ ಕಳಿಸುವುದು ಮಾಡುತ್ತಿದ್ದಾರೆ. ಜನ ಇದನ್ನು ಖಂಡಿಸಬೇಕು ಎಂದರು.
ಜನರು ಏನು ಅನಿಸಿಕೆಗಳನ್ನು ಇಟ್ಟುಕೊಂಡು ನಮಗೆ ಆಶೀರ್ವಾದ ಮಾಡಿದ್ದಾರೆ ಅದನ್ನು ಈಡೇರಿಸುವ ಪ್ರಯತ್ನ ನಮ್ಮದು. ಬಿಜೆಪಿ/ಜೆಡಿಎಸ್ ನವರು ಮನೆ ಮುರುಕರು. ಪ್ರಸ್ತುತ ಅವರಿಬ್ಬರು ಒಂದಾಗಿದ್ದು, ಎಲ್ಲಾ ಪ್ರಕರಣಗಳನ್ನು ಸಿ.ಬಿ.ಐ.ಗೆ ಕೊಡಲು ಒತ್ತಾಯಿಸುತಾರೆ. ಅದೇ ಅವರು ಅಧಿಕಾರದಲ್ಲಿದ್ದಾಗ ಸಿಬಿಐ ಯನ್ನು ಚೋರ್ ಬಚಾವ್ ಸಂಸ್ಥೆ ಎಂದು ಕರೆದಿದ್ದರು. ಈಗ ಸಿಬಿಐ ಮೇಲೆ ಇದ್ದಕ್ಕಿದ್ದಂತೆ ಬಿಜೆಪಿಗೆ ಪ್ರೀತಿ ಹುಟ್ಟಿದೆ. ತನಿಖೆಗೆ ನಾವು ಹೆದರುವುದಿಲ್ಲ, ಏಕೆಂದರೆ ಯಾವ ಅಪರಾಧವನ್ನೂ ಮಾಡಿಲ್ಲ. ಆದರೆ ಕಾನೂನಿನ ಪ್ರಕಾರ ತನಿಖೆಯಾಗಬೇಕು. ಸಂವಿಧಾನ, ಕಾನೂನಿನ ವಿರುದ್ಧವಾಗಿ ಆಗುವ ತನಿಖೆಗಳನ್ನು ನಾವು ಖಂಡಿಸುತ್ತೇವೆ ಎಂದರು.