ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸರ್ಕಾರ ಬರಪರಿಹಾರ ಪ್ರಕಟಿಸಿರುವ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಬರಪರಿಹಾರ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರಕ್ಕೆ ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.
ಭೀಕರ ಬರಗಾಲದ ಕರಿಛಾಯೆಯಲ್ಲಿ ಸಿಲುಕಿ ನರಳುತ್ತಿದ್ದ ನಮ್ಮ ಅನ್ನದಾತ ರೈತರ ನೆರವಿಗೆ ಧಾವಿಸದೆ, ರಾಜ್ಯ ಸರ್ಕಾರ ತನ್ನದೇ ಕೀಳು ರಾಜಕೀಯ ಮೇಲಾಟ, ಕೆಸರೆರಚಾಟದಲ್ಲಿ ನಿರತವಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ತಾಂತ್ರಿಕ ಅಡಚಣೆ ನಿವಾರಿಸಿ, ರಾಜ್ಯದ ಸಂಕಷ್ಟಕ್ಕೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ 3,454 ಕೋಟಿ ರೂ. ಬರ ಪರಿಹಾರ ನೀಡಿದೆ. ಆ ಮೂಲಕ ರಾಜಕೀಯಕ್ಕಿಂತಲೂ ಜನಹಿತಕ್ಕೆ ಆದ್ಯತೆ ನೀಡಿ, ಕರ್ತವ್ಯಪ್ರಜ್ಞತೆ ಮೆರೆದಿದೆ. ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.