ಮಂಡ್ಯ,: ಮಂಡ್ಯದ ಮೈಶುಗರ್ ಕಾರ್ಖಾನೆಯು ಶಾಶ್ವತವಾಗಿ ಕಬ್ಬು ಬೆಳೆಗಾರರಿಗೆ ಆಶ್ರಯವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೌಶಲ್ಯಾಭಿವೃದ್ಧಿ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ, ಸಂಜೀವಿನಿ- ಕೆ.ಎಸ್. ಆರ್.ಎಲ್.ಪಿ.ಎಸ್ ಸಂಸ್ಥೆ ಆಯೋಜಿಸಿದ್ದ ಮಂಡ್ಯ ವಿಶ್ವವಿದ್ಯಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಹಾಗೂ ಸಂಜೀವಿನಿ ಸಾಮಥ್ರ್ಯ, ಜೀವನೋಪಾಯ ವರ್ಷ 2022-23ನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ತನ್ನದೇ ವೈಶಿಷ್ಟ್ಯವನ್ನು ಹೊಂದಿದೆ. ಇಲ್ಲಿನ ರೈತರು ಶ್ರಮಜೀವಿಗಳು, ಸ್ವಾಭಿಮಾನಿಗಳು, ದೇಶಕ್ಕೆ ಅನ್ನ ನೀಡುವವರು. ಅವರ ಭಾವನೆಗಳಿಗೆ ಗೌರವ ನೀಡುವುದು ನಮ್ಮ ಕರ್ತವ್ಯ ಎಂದರು. ಮಂಡ್ಯದ ಸಮಗ್ರ ಅಭಿವೃದ್ಧಿಗೆ ಹಲವಾರು ಸಂಸ್ಥೆಗಳು ಹಾಗೂ ಯೋಜನೆಗಳನ್ನು ರೂಪಿಸಿದೆ. ವಿಸಿ ನಾಲೆ ಅಭಿವೃದ್ಧಿ ಮಾಡಿದವರು ನಾಗೇಡೌಡರು. ನಂತರ 504 ಕೋಟಿ ರೂ.ಗಳ ವೆಚ್ಚದಲ್ಲಿ ಬ್ರಾಂಚ್ ಕಾಲುವೆ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಈ ಭಾಗದ ಹೆಬ್ಬಕವಾಡಿ, ಸೂಳೇ ಕೆರೆ ಹಾಗೂ ಮದ್ದೂರು ಬ್ರಾಂಚ್ ಕಾಲುವೆಗಳ ಸಮಗ್ರ ಅಭಿವೃದ್ಧಿ ಮಾಡಲು ಈ ವರ್ಷ 500 ಕೋಟಿ ರೂ.ಗಳನ್ನು ಒದಗಿಸಿ, ನೀರಾವರಿ ರೈತನ ಹೊಲಕ್ಕೆ ತಲುಪುವ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಶೀಘ್ರದಲ್ಲಿಯೇ ಮೈಶುಗರ್ ಪ್ರಾರಂಭೋತ್ಸವ
ಮೈಶುಗರ್ ಸಕ್ಕರೆ ಕಾರ್ಖಾನೆ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮುಚ್ಚಿ ಹಲವಾರು ವರ್ಷಗಳಾಗಿತ್ತು. ಇದನ್ನು ಸರ್ಕಾರವೇ ನಡೆಸಬೇಕೋ ಅಥವಾ ಖಾಸಗಿಯವರಿಗೆ ವಹಿಸಬೇಕೋ ಎನ್ನುವ ಜಿಜ್ಞಾಸೆ ಇತ್ತು. ಇಲ್ಲಿನ ಪರಿಸ್ಥಿತಿ ಅವಲೋಕಿಸಿ, ಧರಣಿ ಕುಳಿತ ರೈತ ಸಂಘದವರೊಂದಿಗೆ ಮಾತನಾಡಿ, ರೈತರ ಅಹವಾಲುಗಳನ್ನು ಕೇಳಿದ್ದೆ. ಇಷ್ಟು ದೊಡ್ಡ ಕಾರ್ಖಾನೆ, ರೈತರಿಗೆ ಅನ್ನವನ್ನು ಕೊಡುವ ಕಾರ್ಖಾನೆಯನ್ನು ಮುಚ್ಚುವುದು ಪಾಪದ ಕೆಲಸವೆಂದು ಭಾವಿಸಿದೆ. ಹಲವಾರು ನಾಯಕರು ಬಂದು ಹೋಗಿದ್ದರೂ, ಮಾತನಾಡಿದ್ದರೂ ಯಾರೂ ಏನೂ ಮಾಡಿರಲಿಲ್ಲ. ಆದರೆ ಈ ಭಾಗದ ಕಬ್ಬು ಬೆಳೆಗಾರರಿಗೆ ನ್ಯಾಯವನ್ನು ಕೊಡಿಸಲು ತೀರ್ಮಾನ ಮಾಡಿದ್ದರಿಂದ ಇಂದು ಮಂಡ್ಯ ಶುಗರ್ ಕಾರ್ಖಾನೆಯಲ್ಲಿ ಕೆಲಸವನ್ನು ಪ್ರಾರಂಭ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಖುದ್ದಾಗಿ ಬಂದು ಪ್ರಾರಂಭೋತ್ಸವವನ್ನು ಮಾಡುವುದಾಗಿ ತಿಳಿಸಿದರು.
ಮೈಶುಗರ್ ಎಥನಾಲ್ ಘಟಕ ಸ್ಥಾಪನೆ
ಆಡಳಿತಗಾರನಿಗೆ ದೊಡ್ಡ ಹೃದಯವಿರಬೇಕು. ಜನರ ದು:ಖ, ದುಮ್ಮಾನಗಳನ್ನು ತಿಳಿದುಕೊಳ್ಳುವ ವ್ಯವಧಾನವಿರಬೇಕು. ಜನರಿಗೆ ಪರಿಹಾರ ಕೊಡುವ ಇಚ್ಛಾಶಕ್ತಿ ಇರಬೇಕು. ಈ ಕಾರ್ಖಾನೆ ಶಾಶ್ವತವಾಗಿ ಮುಂದುವರೆಯಬೇಕು. ಖಾಸಗಿಯವರು ಇದರ ಲಾಭವನ್ನು ಪಡೆದಂತೆಯೇ ನಮ್ಮ ರೈತರ ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಬರುವ ದಿನಗಳಲ್ಲಿ ಇನ್ನಷ್ಟು ಹಣವನ್ನು ಕೊಟ್ಟು ಎಥನಾಲ್ ಘಟಕಗಳನ್ನು ಸ್ಥಾಪಿಸಿ, ಲಾಭದಾಯಕವಾಗುವಂತೆ ಮಾಡಲಾಗುವುದು. ಶಾಶ್ವತವಾಗಿ ಕಬ್ಬು ಬೆಳೆಗಾರರಿಗೆ ಈ ಕಾರ್ಖಾನೆ ಆಶ್ರಯಕೊಡುವ ರೀತಿಯಲ್ಲಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೌಶಲ್ಯಾಭಿವೃದ್ಧಿ ಇಲಾಖೆಯ ಸಂಜೀವಿನಿ- ಕೆ.ಎಸ್.ಆರ್.ಎಲ್.ಪಿ.ಎಸ್ ಬದುಕು, ಭರವಸೆ ನೀಡುವ ಕಾರ್ಯಕ್ರಮ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೂರದೃಷ್ಟಿ ಇಟ್ಟುಕೊಂಡು, ನಮ್ಮ ದೇಶದ ಮಾನವ ಸಂಪನ್ಮೂಲವನ್ನು ದೇಶ ಕಟ್ಟಲು ತೊಡಗಿಸಬೇಕೆಂದು ಸಂಜೀವಿನಿ ಯೋಜನೆಯನ್ನು ರೂಪಿಸಿದ್ದಾರೆ. ಪ್ರಧಾನಮಂತ್ರಿಗಳು ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಆವಾಸ್ ಯೋಜನೆಗಳನ್ನು ರೂಪಸಿದಂತೆ ಈ ಯೋಜನೆಯನ್ನು ರೂಪಿಸಿದ್ದಾರೆ. 460 ಕೋಟಿ ರೂ.ಗಳನ್ನು ಸಂಜೀವಿನಿಗೆ ಒದಗಿಸಿ, ಮಾರುಕಟ್ಟೆ ಸೌಲಭ್ಯವನ್ನೂ ಒದಗಿಸಲಾಗಿದೆ. ಮಹತ್ವದ ಸ್ತ್ರೀ ಸಾಮಥ್ರ್ಯ ಯೋಜನೆಯನ್ನು ಘೋಷಿಸಲಾಗಿದ್ದು, 1.50 ಲಕ್ಷ ರೂ.ಗಳನ್ನು ಪ್ರತಿ ಗ್ರಾಮದ ಒಂದು ಸ್ತ್ರೀ ಶಕ್ತಿ ಸಂಘಕ್ಕೆ ನೀಡಲಾಗುವುದು. ರಾಜ್ಯದ 33,000 ಗ್ರಾಮಗಳಲ್ಲಿ ಪ್ರತಿ ಗ್ರಾಮಕ್ಕೂ ಈ ಸೌಲಭ್ಯ ನೀಡಲಾಗುತ್ತಿದೆ. 500 ಕೋಟಿ ರೂ.ಗಳನ್ನು ಇದಕ್ಕಾಗಿ ಮೀಸಲಿರಿಸಿದ್ದು, ಸುಮಾರು 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ ನೀಡುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದಾಗಿದೆ. 1.50 ಲಕ್ಷದ ಜೊತೆಗೆ ಎಸ್.ಬಿ.ಐ ಜೊತೆಗೆ ಒಡಂಬಡಿಕೆಯಾಗಿದೆ. 10 ಲಕ್ಷ ರೂ.ಗಳ ಯೋಜನೆಗಳನ್ನು ಒಂದೊಂದು ಸಂಘಕ್ಕೆ ನೀಡಲಾಗುವುದು. ಸಂಜೀವಿನಿ ಸಾಮಥ್ರ್ಯ, ಸ್ತ್ರೀ ಸಾಮಥ್ರ್ಯ, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಯಶಸ್ವಿಯಾಗಬೇಕು. ರಾಜ್ಯವನ್ನು ಪ್ರಗತಿಪಥದಲ್ಲಿ ಮುನ್ನಡೆಸುವ ಈ ಯೋಜನೆಯನ್ನು ಯಶಸ್ವಿಗೊಳಿಸುವ ಗುರುತರ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ತಿಳಿಸಿದರು.
ಹೊಸ ಚಿಂತನೆ, ಗುರಿ, ಹೊಸ ದಾರಿಯಲ್ಲಿ ನಡೆಯುವ ಮೂಲಕ ಅಭಿವೃದ್ಧಿಯ ಪಥದಲ್ಲಿ ನಡೆಯಬೇಕಿದೆ. ಅಭಿವೃದ್ಧಿಯ ಪರಿವರ್ತನೆಗೆ ಜಾತಿಮತಪಂಥಗಳ ಭೇದಗಳನ್ನು ತೊರೆದು ಒಂದುಗೂಡಬೇಕಿದೆ. ಗಂಡು ಮೆಟ್ಟಿನ ನಾಡು ಮಂಡ್ಯದ ಜನಪರ ಯೋಜನೆಗಳು, ನೀರಾವರಿ, ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.