ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗಕ್ಕೆ ನೂತನ ಆಯುಕ್ತರ ನೇಮಕವಾಗಿದೆ. ರಾಜ್ಯ ಮಾಹಿತಿ ಆಯುಕ್ತರಾಗಿ ಹಿರಿಯ ಪತ್ರಕರ್ತ ಡಾ.ಮಹೇಶ ವಾಳ್ವೇಕರ್ , ಐಎಎಸ್ ಅಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಬಿ.ವೆಂಕಟ್ ಸಿಂಗ್ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಪ್ರಸ್ತುತ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮಹೇಶ ವಾಳ್ವೇಕರ್ ಪದವೀಧರರಾಗಿದ್ದು, ಮಾಹಿತಿ ಆಯೋಗದಲ್ಲಿ ಕಾನೂನು ತಜ್ಞರು ಕೂಡಾ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.
ಕಳೆದ 25 ವರ್ಷಗಳಿಂದ ವಿದ್ಯುನ್ಮಾನ, ಬಾನುಲಿ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ಡಾ.ಮಹೇಶ ವಾಳ್ವೇಕರ್ , ಆಕಾಶವಾಣಿಯ ಪ್ರದೇಶ ಸಮಾಚಾರ ಓದುಗರಾಗಿ ಮನೆಮಾತಾದವರು. ಅನೇಕ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮಹೇಶ ವಾಳ್ವೇಕರ್ ಆಯ್ಕೆಯನ್ನು ವಕೀಲ ಸಮುದಾಯ ಕೂಡಾ ಸ್ವಾಗತಿಸಿದೆ.
ರಾಜ್ಯ ಮಾಹಿತಿ ಆಯೋಗಕ್ಕೆ ಕಾನೂನು ಪದವೀಧರರಲ್ಲದವರನ್ನು ರಾಜಕೀಯ ನೇಮಕಾತಿ ರೂಪದಲ್ಲಿ ಆಯ್ಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ಡಾ.ಮಹೇಶ ವಾಳ್ವೇಕರ್ ಅವರ ಆಯ್ಕೆ ನ್ಯಾಯಸಮ್ಮತ ಎಂದು ಸಾಮಾಜಿಕ ಹೋರಾಟಗಾರರೂ ಪ್ರತಿಪಾದಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪಿಹೆಚ್ಡಿ ಮಾಡಿರುವ ಡಾ. ಮಹೇಶ ವಾಳ್ವೇಕರ್ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ರಾಜ್ಯ ಕಾನೂನುವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ಇವರು ಕಾನೂನು ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮೂಲತಃ ವೈದ್ಯನಾಗಿದ್ದರೂ, ಪತ್ರಿಕೋದ್ಯಮದ ಬಗೆಗಿನ ಆಸಕ್ತಿ ಹಿನ್ನೆಲೆಯಲ್ಲಿ ಬಾನುಲಿ ಹಾಗೂ ನ್ಯೂಸ್ ಚಾನೆಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ.
ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್, ಈಗ ಕೇಂದ್ರ ಮಂತ್ರಿಯಾಗಿರುವ ಪ್ರಲ್ಹಾದ್ ಜೋಶಿ ಸಹಿತ ಅನೇಕ ನಾಯಕರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿರುವ ಡಾ.ಮಹೇಶ ವಾಲ್ವೇಕರ್, ಪ್ರಸಕ್ತ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸೇವೆ ಸಲ್ಲಿಸುತ್ತಿದ್ದಾರೆ.