ಬೆಂಗಳೂರು: ಹಿರಿಯ ನಾಯಕ, ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. “ಶೋಷಿತರ ಪರ ಗಟ್ಟಿ ದನಿಯಾಗಿದ್ದ, ಮಾರ್ಗದರ್ಶಕರು, ಹಿತೈಷಿಗಳು ಆಗಿದ್ದ ಶ್ರೀನಿವಾಸ್ ಪ್ರಸಾದ್ (75) ಅವರ ಅಗಲಿಕೆ ಸುದ್ದಿ ಕೇಳಿ ನೋವಾಗಿದೆ ಎಂದವರು ಹೇಳಿದ್ದಾರೆ.
ಇವರ ನಿಧನದಿಂದ ಮೌಲ್ಯಧಾರಿತ ರಾಜಕಾರಣದ ಕೊಂಡಿ ಮರೆಯಾದಂತಾಗಿದೆ. ಶ್ರೀನಿವಾಸ್ ಪ್ರಸಾದ್ ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವರಾಗಿದ್ದಾಗ ಕರ್ನಾಟಕ ರಾಜ್ಯದ ಬೇಡಿಕೆಗಳಿಗೆ ದನಿಯಾಗಿದ್ದರು. ಕಿರಿಯ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದರು, ಮಾದರಿಯಾಗಿದ್ದರು ಎಂದಿರುವ ಡಿಕೆಶಿ, ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಶೋಷಿತರ ಪರ ದನಿ ಎತ್ತುತ್ತಿದ್ದರು. ವಿಧಾನಸಭೆ ಹಾಗೂ ಸಂಸತ್ ಪ್ರತಿನಿಧಿಸಿದ್ದರು. ಕೆಲ ಕಾಲ ಇವರು ಹಾಗೂ ನಾನು ಸಂಪುಟ ಸಹೋದ್ಯೋಗಿಗಳಾಗಿದ್ದೆವು. ಈ ವೇಳೆ ಅವರ ರಾಜಕೀಯ ಜಾಣ್ಮೆಯನ್ನು ಹತ್ತಿರದಿಂದ ಕಂಡಿದ್ದೇನೆ. ಇವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬ ವರ್ಗ, ಅಭಿಮಾನಿಗಳಿಗೆ ಭಗವಂತನು ಕರುಣಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ” ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.