ಬೆಂಗಳೂರು: ಕೇರಳ ವಿಧಾನಸಭೆಯಲ್ಲಿ ಮಂಡನೆಯಾಗಿರುವ ಮಲೆಯಾಳಿ ಭಾಷಾ ಮಸೂದೆಯಿಂದ ಗಡಿಭಾಗದ ಜಿಲ್ಲೆಗಳಲ್ಲಿ, ವಿಶೇಷವಾಗಿ ಕಾಸರಗೋಡಿನಲ್ಲಿ ನೆಲೆಸಿರುವ ಕನ್ನಡಿಗರ ಮೇಲಾಗುವ ದುಷ್ಪರಿಣಾಮಗಳ ಕುರಿತು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು, ಮಸೂದೆಯ ಪುನರ್ ಪರಿಶೀಲನೆಗೆ ಒತ್ತಾಯಿಸಿದ್ದಾರೆ.
ಪರಸ್ಪರ ಗೌರವ, ಒಕ್ಕೂಟ ವ್ಯವಸ್ಥೆಯೊಳಗಿನ ಸಹಕಾರ ಮತ್ತು ಸಾಂವಿಧಾನಿಕ ಜವಾಬ್ದಾರಿಯ ಭಾವನೆಯಿಂದ ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ಮೌಲ್ಯಗಳು ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ ಸಂಬಂಧವನ್ನು ದೀರ್ಘಕಾಲದಿಂದ ಮಾರ್ಗದರ್ಶನ ಮಾಡುತ್ತಿದೆ. ಈ ಎರಡು ರಾಜ್ಯಗಳು ಕೇವಲ ಭೌಗೋಳಿಕವಾಗಿ ಮಾತ್ರವಲ್ಲ, ಆಳವಾದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಮಾನವೀಯ ಬಂಧಗಳಿಂದ ಬೆಸೆದುಕೊಂಡಿವೆ ಎಂದು ಸಿದ್ದರಾಮಯ್ಯ ಗಮನಸೆಳೆದಿದ್ದಾರೆ.
ಈ ಸಂದರ್ಭದಲ್ಲಿ, ಪ್ರಸ್ತಾಪಿತ ಮಲಯಾಳಂ ಭಾಷಾ ಮಸೂದೆಯ ಬಗ್ಗೆ ನನಗಿರುವ ಗಂಭೀರ ಕಳವಳವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಈ ಮಸೂದೆಯು ಕನ್ನಡ ಮಾಧ್ಯಮದ ಶಾಲೆಗಳಲ್ಲೂ, ವಿಶೇಷವಾಗಿ ಕಾಸರಗೋಡಿನಂತಹ ಗಡಿ ಜಿಲ್ಲೆಗಳಲ್ಲಿ ಮೊದಲ ಭಾಷೆಯನ್ನಾಗಿ ಮಲಯಾಳಂ ಕಲಿಕೆ ಕಡ್ಡಾಯಗೊಳಿಸುವುದನ್ನು ಒಳಗೊಂಡಿದೆ ಎಂದಿರುವ ಸಿಎಂ, ಭಾರತದ ನಾಗರಿಕತೆಯ ಶಕ್ತಿಯು ಯಾವಾಗಲೂ ನಿರ್ಭೀತ ಬಹುತ್ವದ ಮೇಲೆ ನಿಂತಿದೆ. ನಮ್ಮ ದೇಶದಲ್ಲಿ ಭಾಷೆಗಳು ಕಡ್ಡಾಯತೆಯ ಬದಲಿಗೆ ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮೂಲಕ ವಿಕಸನಗೊಂಡಿವೆ. ಕಾಸರಗೋಡಿನಂತಹ ಗಡಿ ಪ್ರದೇಶಗಳು ಈ ತತ್ವದ ಜೀವಂತ ಉದಾಹರಣೆಗಳಾಗಿವೆ. ಅಲ್ಲಿ ಮಲಯಾಳಂ, ಕನ್ನಡ, ತುಳು, ಬ್ಯಾರಿ ಮತ್ತು ಇತರ ಭಾಷೆಗಳನ್ನಾಡುವ ಜನರು ತಲೆಮಾರುಗಳಿಂದ ಸಾಮರಸ್ಯದಿಂದ ಜೀವನ, ಶಿಕ್ಷಣ ಮತ್ತು ಗುರುತನ್ನು ರೂಪಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.
ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾಷೆಯು ಕೇವಲ ಶೈಕ್ಷಣಿಕ ಆಯ್ಕೆಯಲ್ಲ; ಅದು ಅವರ ಅಸ್ಮಿತೆ, ಘನತೆ ಮತ್ತು ಅವಕಾಶಗಳಿಗೆ ದಾರಿಯಾಗಿದೆ. ಒಂದೇ ಭಾಷಾ ಮಾರ್ಗವನ್ನು ಕಡ್ಡಾಯಗೊಳಿಸುವ ಯಾವುದೇ ನೀತಿಯು ಮಕ್ಕಳ ಮೇಲೆ ಅನಗತ್ಯ ಹೊರೆಯನ್ನು ಹಾಕುವ ಸಾಧ್ಯತೆಯನ್ನು ಹೊಂದಿದೆ, ಭಾಷಾ ಅಲ್ಪಸಂಖ್ಯಾತರು ನಡೆಸುವ ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಈ ಸಮುದಾಯಗಳಿಗೆ ನಂಬಿಕೆ ಜೊತೆಗೆ ಅವಿರತ ಸೇವೆ ಸಲ್ಲಿಸುತ್ತಿರುವ ದೀರ್ಘಕಾಲೀನ ಶೈಕ್ಷಣಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸುತ್ತದೆ ಈ ಪತ್ರದಲ್ಲಿ ಹೇಳಿದ್ದಾರೆ.
ಕಾಸರಗೋಡಿನಲ್ಲಿ, ವಿಶೇಷವಾಗಿ ಗಡಿ ಭಾಗದಲ್ಲಿ ಬಹುಸಂಖ್ಯಾತರಾಗಿರುವ ಜನರು ಕನ್ನಡದಲ್ಲಿ ಶಿಕ್ಷಣವನ್ನು ಅವಲಂಬಿಸಿದ್ದಾರೆ, ಇವರು ಕನ್ನಡ ಭಾಷಾ ಶಿಕ್ಷಣವನ್ನು ಕಲಿಯಲು ಬಯಸುತ್ತಾರೆ ಎಂಬುದು ವಾಸ್ತವಾಂಶ. ಅವರ ಈ ಆದ್ಯತೆಯು ದಶಕಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂವಹನದ ಮೂಲಕ ಸ್ವಾಭಾವಿಕವಾಗಿ ವಿಕಸನಗೊಂಡಿದೆ. ಈ ಸತ್ಯವನ್ನು ಗೌರವಿಸುವುದು ಮಲಯಾಳಂ ಅನ್ನು ದುರ್ಬಲಗೊಳಿಸುವುದಿಲ್ಲ; ಬದಲಿಗೆ ಭಾರತದ ಬಹುತ್ವದ ಬೇರನ್ನು ಬಲಪಡಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ನಮ್ಮ ಸಂವಿಧಾನವು ಭಾಷಾ ಅಲ್ಪಸಂಖ್ಯಾತರಿಗೆ ಸ್ಪಷ್ಟ ರಕ್ಷಣೆಯನ್ನು ನೀಡುತ್ತದೆ. ಅನುಚ್ಛೇದ 29 ಮತ್ತು 30 ಭಾಷೆಯನ್ನು ಸಂರಕ್ಷಿಸುವ ಹಕ್ಕು ಮತ್ತು ಇಚ್ಛೆಗನುಗುಣವಾಗಿ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುವ ಹಕ್ಕನ್ನು ಖಾತರಿಪಡಿಸುತ್ತವೆ. ಅನುಚ್ಛೇದ 350ಎ ಮಾತೃಭಾಷೆಯಲ್ಲಿ ಶಿಕ್ಷಣದ ಸೌಲಭ್ಯಗಳನ್ನು ಕಡ್ಡಾಯಗೊಳಿಸುತ್ತದೆ, ಮತ್ತು ಅನುಚ್ಛೇದ 350ಬಿ ಅಲ್ಪಸಂಖ್ಯಾತ ಭಾಷಾ ಹಿತಾಸಕ್ತಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ರಾಜ್ಯಕ್ಕೆ ಒಪ್ಪಿಸುತ್ತದೆ. ಯಾವುದೇ ಕಾನೂನು ಕ್ರಮವು ಸಾಂವಿಧಾನಿಕ ಕಾನೂನುಬದ್ಧತೆಯನ್ನು ಮಾತ್ರವಲ್ಲ, ಸಾಂವಿಧಾನಿಕ ನೈತಿಕತೆಯನ್ನೂ ಪ್ರತಿಬಿಂಬಿಸಬೇಕು ಎಂದಿದ್ದಾರೆ.
ಕರ್ನಾಟಕವು ಸಾಮಾಜಿಕ ಸುಧಾರಣೆ, ಸಮಾನತೆ ಮತ್ತು ಸಮುದಾಯಿಕ ಚಿಂತನೆಗಳಿಂದ ರೂಪುಗೊಂಡ ಕನ್ನಡ ಭಾಷೆಯಲ್ಲಿ ಅಪಾರ ಹೆಮ್ಮೆಯನ್ನು ಹೊಂದಿದೆ. ಅದೇ ಸಮಯದಲ್ಲಿ, ಒಂದು ಭಾಷೆಯನ್ನು ಉತ್ತೇಜಿಸುವುದು ಮತ್ತೊಬ್ಬರ ಮೇಲೆ ಹೇರುವಿಕೆಯಾಗಬಾರದು ಎಂಬ ತತ್ವವನ್ನು ನಾವು ಯಾವಾಗಲೂ ಎತ್ತಿಹಿಡಿದಿದ್ದೇವೆ. ಈ ನಂಬಿಕೆಯು ನಮ್ಮ ನೀತಿಗಳನ್ನು ಮಾರ್ಗದರ್ಶಿಸಿದೆ ಮತ್ತು ಸಾಮರಸ್ಯಕ್ಕೆ ನಮ್ಮ ಬದ್ಧತೆಯನ್ನು ಪ್ರತಿಫಲಿಸುತ್ತದೆ ಎಂದವರು ಹೇಳಿದ್ದಾರೆ.
ಕೇರಳ ಸರ್ಕಾರವು ಕಾಯ್ದೆ ಜಾರಿಗೆ ಮುನ್ನ ಭಾಷಾ ಅಲ್ಪಸಂಖ್ಯಾತ ಸಮುದಾಯಗಳು, ಶಿಕ್ಷಣ ತಜ್ಞರು ಮತ್ತು ನೆರೆಯ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು ಹಾಗೂ ತನ್ನ ಪ್ರಸ್ತಾಪಿತ ಮಸೂದೆಯನ್ನು ಪುನರ್ ಪರಿಶೀಲನೆಗೆ ಒಡ್ಡಬೇಕೆಂದು ಕೋರುತ್ತೇನೆ. ಇಂತಹ ಸಂವಾದವು ಭಾರತದ ಐಕ್ಯತೆಯನ್ನು ಬಲಪಡಿಸುತ್ತದೆ ಮತ್ತು ಪ್ರತಿ ಭಾಷೆ ಮತ್ತು ಪ್ರತಿ ನಾಗರಿಕನ ಘನತೆಯನ್ನು ಕಾಪಾಡುತ್ತದೆ ಎಂದಿರುವ ಸಿದ್ದರಾಮಯ್ಯ, ಈ ಮಸೂದೆ ಅಂಗೀಕಾರಗೊಂಡರೆ, ಕರ್ನಾಟಕವು ಲಭ್ಯವಿರುವ ಪ್ರತಿ ಸಾಂವಿಧಾನಿಕ ಹಕ್ಕನ್ನು ಬಳಸಿಕೊಂಡು ಭಾಷಾ ಅಲ್ಪಸಂಖ್ಯಾತರ ರಕ್ಷಣೆಗಾಗಿ ಮತ್ತು ನಮ್ಮ ಒಕ್ಕೂಟ ವ್ಯವಸ್ಥೆಯ ಬಹುತ್ವ ಚಿಂತನೆಯನ್ನು ಕಾಪಾಡಲು ವಿರೋಧಿಸಲಿದೆ. ಇದು ವಿರೋಧಿಸುವ ನಕಾರಾತ್ಮಕ ಉದ್ದೇಶವಾಗಿರದೆ, ಸಂವಿಧಾನ ಮತ್ತು ಜನರ ಧ್ವನಿಯನ್ನು ಎಂದಿಗೂ ಅಡಗಿಸಬಾರದು ಎಂಬ ನಮ್ಮ ಕರ್ತವ್ಯವಾಗಿರಲಿದೆ. ಪ್ರತಿ ಭಾಷೆಯು ಸ್ವತಂತ್ರವಾಗಿ ವಿಕಸನಗೊಳ್ಳಲು ಇರುವ ಅಡೆಗಡೆಗಳ ನಿವಾರಣೆಗೆ ಸಂವಿಧಾನಿಕ ಮೌಲ್ಯಗಳು ಹಾಗೂ ಪರಸ್ಪರ ಸಂವಾದವು ನಮಗೆ ಮಾರ್ಗದರ್ಶನ ನೀಡಲಿವೆ ಎಂದು ವಿಸ್ವಾಸ ವ್ಯಕ್ತಪಡಿಸಿದ್ದಾರೆ.



















































