ಕಾರವಾರ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಂಗನ ಜ್ವರ ಎಂದು ಕರೆಯಲ್ಪಡುವ ಕ್ಯಾಸನೂರು ಅರಣ್ಯ ಕಾಯಿಲೆಗೆ (ಕೆಎಫ್ಡಿ) ವೃದ್ಧೆಯೊಬ್ಬರು ಬಲಿಯಾಗಿದ್ದು, ಈ ಕಾಯಿಲೆಯಿಂದ ರಾಜ್ಯದ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ.
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕೂರ್ಲಕೈ ಗ್ರಾಮದ ನಿವಾಸಿಯಾಗಿರುವ 60 ವರ್ಷದ ಮಹಿಳೆ ಮೂರು ದಿನಗಳಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಸುಮಾರು 20 ದಿನಗಳ ಹಿಂದೆ ಮಂಗನ ಜ್ವರದಿಂದ ಬಳಲುತ್ತಿದ್ದ ಆಕೆ ತೀವ್ರ ಜ್ವರದ ಲಕ್ಷಣಗಳೊಂದಿಗೆ ಹೋರಾಡುತ್ತಿದ್ದಳು. ಸಿದ್ದಾಪುರ ತಾಲೂಕಿನಲ್ಲಿ ಮಾತ್ರ ಮಂಗನ ಜ್ವರ ಪ್ರಕರಣಗಳ ಸಂಖ್ಯೆ 43 ಕ್ಕೆ ತಲುಪಿದೆ ಎನ್ನಲಾಗಿದೆ. ರಾಜ್ಯದಲ್ಲಿ ಪ್ರಸ್ತುತ 103 ಮಂಗನ ಜ್ವರದ ಸಕ್ರಿಯ ಪ್ರಕರಣಗಳಿವೆ ಎನ್ನಲಾಗಿದ್ದು, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಹಿಂದೆ ಸಾವಿನ ಪ್ರಕರಣಗಳು ವರದಿಯಾಗಿವೆ.
ಈ ನಡುವೆ ಮಗನ ಕಾಯಿಲೆ ಹರಡದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಿರ್ದೇಶನದಂತೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. .