ಹಾವೇರಿ: ಹಾವೇರಿ ತಾಲೂಕಿನ ಗುತ್ತಲ ಪಟ್ಟಣದಲ್ಲಿ ಅಕ್ರಮ ಮಟ್ಕಾ ದಂಧೆ ನಡೆಯುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಶಾಸಕ ಹಾಗೂ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ (Rudrappa Lamani) ಸ್ವತಃ ದಾಳಿ ನಡೆಸಿ ಬುಕ್ಕಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ನಡೆದಿದೆ.
ಗುತ್ತಲ ಪಟ್ಟಣದ ಪ್ರಾಥಮಿಕ ಮಕ್ಕಳ ಶಾಲೆಯ ಸಮೀಪದ ಕೊಠಡಿಯೊಂದರಲ್ಲಿ ಮಟ್ಕಾ ಬರೆಯಲಾಗುತ್ತಿದೆ. ಇದನ್ನು ಯಾರೂ ತಡೆಯುತ್ತಿಲ್ಲ ಎಂದು ಸ್ಥಳೀಯ ಮಹಿಳೆಯರು ಸೋಮವಾರ ಶಾಸಕರ ಗಮನಸೆಳೆದರು. ನಾಡ ಕಚೇರಿ ಉದ್ಘಾಟನೆ ಹಾಗೂ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ವೇಳೆ, ಸ್ಥಳೀಯರು ಈ ಸಮಸ್ಯೆಯನ್ನು ಮತ್ತೊಮ್ಮೆ ಅವರ ಗಮನಕ್ಕೆ ತಂದರು.
ಕೂಡಲೇ ಕಾರ್ಯಪ್ರವೃತ್ತರಾದ ರುದ್ರಪ್ಪ ಲಮಾಣಿ ಮಟ್ಕಾ ಅಡ್ಡೆಗೆ ದಾಳಿ ನಡೆಸಿದಾಗ ವ್ಯಕ್ತಿಯೋರ್ವ ಮಟ್ಕಾ ಬರೆಯುತ್ತಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ಗುತ್ತಲ ಪೊಲೀಸ್ ಠಾಣೆ (Guttal Police Station) ಸಿಬ್ಬಂದಿಗೆ ಒಪ್ಪಿಸಿದರು.
ಈ ವೇಳೆ ಪಿಎಸ್‌ಐಗೆ ತರಾಟೆಗೆ ತೆಗೆದುಕೊಂಡ ಶಾಸಕರು, ಮಟ್ಕಾ ದಂಧೆಗೆ ಕಟ್ಟುನಿಟ್ಟಿನ ಕಡಿವಾಣ ಹಾಕುವಂತೆ ತಹಶೀಲ್ದಾರ್ ಶರಣಮ್ಮ (Sharannamma) ಹಾಗೂ ಗುತ್ತಲ ಪೊಲೀಸ್ ಠಾಣೆ (Guttal Police Station) ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
























































